ಬೆಂಗಳೂರು: ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಮನಗೂಳಿ ಪುತ್ರ ಅಶೋಕ್ ಮನಗೂಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಸೇರಿಕೊಂಡಿದ್ದಾರೆ.
ಡಿಕೆಶಿ ಪಕ್ಷದ ಬಾವುಟ ನೀಡಿ, ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು. ಈಶ್ವರ್ ಖಂಡ್ರೆ, ರಾಮಲಿಂಗಾರೆಡ್ಡಿ, ಎಂಬಿ ಪಾಟೀಲ್, ಸಲೀಂ ಅಹ್ಮದ್ ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮನಗೂಳಿಯವರು ಸಾಯುವ ಮುನ್ನ ಭೇಟಿ ಮಾಡಿದ್ದರು. ಆ ವೇಳೆ ನನ್ನ ಪುತ್ರನನ್ನ ನಿಮ್ಮ ಕೈಗೆ ಬಿಡ್ತೇವೆ ಅಂದಿದ್ದರು. ಅದಾದ 15 ದಿನಕ್ಕೆ ಕೊನೆಯುಸಿರೆಳೆದರು. ಇವತ್ತು ಅವರ ಪುತ್ರ ಅಶೋಕ್ ಕಾಂಗ್ರೆಸ್ಗೆ ಸೇರ್ಪಡೆಯಾಗ್ತಿದ್ದಾರೆ. ಯಾವಾಗ ಬೇಕಾದರೂ ಉಪಚುನಾವಣೆ ಬರಬಹುದು. ಹೀಗಾಗಿ ಸ್ಥಳೀಯ ಮುಖಂಡರ ಜೊತೆ ಚರ್ಚಿಸಿದ್ದೆವು. ಇದೀಗ ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ ಎಂದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಅಶೋಕ್ ಮನಗೂಳಿ ಷರತ್ತಿಲ್ಲದೆ ಪಕ್ಷಕ್ಕೆ ಸೇರಿದ್ದಾರೆ. ಕೆಲವು ದಿನಗಳ ಹಿಂದೆ ನನ್ನನ್ನ ಭೇಟಿ ಮಾಡಿದ್ದರು. ಅವರ ತಂದೆಯೂ ನನ್ನನ್ನ ಭೇಟಿ ಮಾಡಿದ್ದರು. ನಾನು ಜೆಡಿಎಸ್ನಲ್ಲಿ ಶಾಸಕನಾಗಿದ್ದೇನೆ. ನಾನು ಕಾಂಗ್ರೆಸ್ಗೆ ಬರೋದಕ್ಕೆ ಆಗಲ್ಲ. ನನ್ನ ಮಗನನ್ನ ಸೇರಿಸಿಕೊಳ್ಳಿ ಎಂದಿದ್ದರು. ಇವತ್ತು ಅಶೋಕ್ ಪಕ್ಷಕ್ಕೆ ಸೇರಿದ್ದಾರೆ. ಇಲ್ಲಿಯವರೆಗೆ ಅವರು, ತಂದೆ ಜೆಡಿಎಸ್ನಲ್ಲಿದ್ದರೂ, ನಮ್ಮ ಜೊತೆಯಲ್ಲೂ ಮಿನಿಸ್ಟರ್ ಆಗಿದ್ದರು. ಮನಗೂಳಿ ನಮಗೆ ತುಂಬಾ ಚಿರಪರಿಚಿತರು. ಈಗ ಅವರ ಮಗ ಪಕ್ಷಕ್ಕೆ ಸೇರ್ಪಡೆ ಆಗಿರುವುದು ಅನುಕೂಲವಾಗಲಿದೆ ಎಂದರು.