ಬೆಂಗಳೂರು: ಕಳೆದ ಮೂರ್ನಾಲ್ಕು ತಿಂಗಳಿಂದ ಸಂಬಳ ನೀಡದಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು ಸಿಡಿದೆದ್ದಿದ್ದಾರೆ. ರಾಜ್ಯದಲ್ಲಿ ಒಟ್ಟು 42 ಸಾವಿರ ಆಶಾ ಕಾರ್ಯಕರ್ತೆಯರು ಇದ್ದಾರೆ. ಬಿರು ಬಿಸಲು, ಕೊರೆವ ಚಳಿ ಲೆಕ್ಕಿಸದೆ ಇವರು ಕೆಲಸ ಮಾಡುತ್ತಾರೆ. ಆದರೆ ಸುಮಾರು 3-4 ತಿಂಗಳಿಂದ ಸಂಬಳವಿಲ್ಲದೆ ಪರದಾಡುವಂತಾಗಿದೆ ಎಂದು ಎಐಟಿಯುಸಿ (ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್) ತೀವ್ರ ಬೇಸರ ವ್ಯಕ್ತಪಡಿಸಿದೆ.
ರಾಜ್ಯ ಸರ್ಕಾರ ನೀಡುವ ಗೌರವ ಧನ ಹಾಗೂ ಕೇಂದ್ರ ಸರ್ಕಾರದ ಪ್ರೋತ್ಸಾಹ ಧನಗಳೇ ನಮ್ಮ ಬದುಕಿಗೆ ಆಧಾರ. ಈಗ ಅದಕ್ಕೂ ಕೊಳ್ಳಿ ಇಡುತ್ತಿರುವುದು ಎಷ್ಟು ಸರಿ?. ನೂತನ ಸರ್ಕಾರವಾದರೂ ನಮಗೆ ನ್ಯಾಯ ಒದಗಿಸಲಿ. ಪದೇ ಪದೇ ಮೀಟಿಂಗ್ ಮಾಡಿ ಪೊಳ್ಳು ಭರವಸೆ ಕೊಡುವ ಬದಲು ಹಣ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಆಶಾ ಕಾರ್ಯಕರ್ತೆಯರಿಗೆ 1500 ರೂ. ಸಂಬಳ ಏರಿಕೆ, 1200 ವೈದ್ಯರ ನೇಮಕಕ್ಕೆ ನಿರ್ಧಾರ
6 ನೇ ಗ್ಯಾರಂಟಿ ಜಾರಿಗೆ ಒತ್ತಾಯ: ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂ., ಆಶಾ ಕಾರ್ಯಕರ್ತೆಯರಿಗೆ 8 ಸಾವಿರ ರೂ. ಹಾಗೂ ಬಿಸಿಯೂಟ ನೌಕರರಿಗೆ 5 ಸಾವಿರ ರೂಪಾಯಿ ವೇತನ ನೀಡುವುದಾಗಿ ಬೆಳಗಾವಿಯಲ್ಲಿ ಇತ್ತೀಚೆಗೆ ಕ್ರಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಘೋಷಿಸಿದ್ದರು. ಇದು ಕಾಂಗ್ರೆಸ್ 6ನೇ ಗ್ಯಾರಂಟಿ ಕೂಡ ಹೌದು.
ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಲಿ 11,500 ರೂ.ಗಳಿಂದ 15,000 ಸಾವಿರ ರೂ., ಸಹಾಯಕಿಯರಿಗೆ ಹಾಲಿ 7,500 ರೂ.ದಿಂದ 10,000 ಸಾವಿರ ರೂ., ಆಶಾ ಕಾರ್ಯಕರ್ತೆಯರಿಗೆ ಈಗ ಇರುವ 5,000 ರೂ.ಗಳಿಂದ 8,000 ರೂ. ಹಾಗೂ ಬಿಸಿಯೂಟ ಅಡುಗೆ ಕಾರ್ಯಕರ್ತೆಯರಿಗೆ ಹಾಲಿ 3,700 ರೂ.ದಿಂದ 5,000 ರೂ.ಗಳಿಗೆ ಗೌರವ ಧನ ಪರಿಷ್ಕರಣೆ ಮಾಡುವುದಾಗಿ ಘೋಷಿಸಿದ್ದರು. ಈ ಕೂಡಲೇ ಭರವಸೆಗಳನ್ನು ಈಡೇರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕೋರಿದ್ದಾರೆ.
ಇದನ್ನೂ ಓದಿ: ಮಳೆರಾಯನ ಅಬ್ಬರದ ನಡುವೆಯೂ ಆಶಾ ಕಾರ್ಯಕರ್ತರ ಪ್ರತಿಭಟನೆ; ಕೈಯಲ್ಲಿ ಛತ್ರಿಹಿಡಿದು ಸರ್ಕಾರ ವಿರುದ್ಧ ಘೋಷಣೆ..
10 ಲಕ್ಷ 'ಆಶಾ'ವಾದಿಗಳಿಗೆ WHO ಗೌರವ: ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಇತ್ತೀಚೆಗೆ 'ಜಾಗತಿಕ ಆರೋಗ್ಯ ನಾಯಕರ ಪ್ರಶಸ್ತಿ'ಗಳನ್ನು ಘೋಷಿಸಿದ್ದಾರೆ. ಮಹಾಮಾರಿ ಕೋವಿಡ್-19 ಸಾಂಕ್ರಾಮಿಕ ವೈರಸ್ ನಿಯಂತ್ರಿಸಲು ಅವಿರತವಾಗಿ ಶ್ರಮಿಸಿ, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಸೌಲಭ್ಯಗಳು ತಲುಪುವಂತೆ ಮಾಡಿದ ಭಾರತದ ಒಂದು ಮಿಲಿಯನ್ (10 ಲಕ್ಷ) ಆಶಾ ಕಾರ್ಯಕರ್ತೆಯರನ್ನು ವಿಶ್ವ ಆರೋಗ್ಯ ಸಂಸ್ಥೆ ಗೌರವಿಸಿದೆ.
ಇದನ್ನೂ ಓದಿ: ಕೋವಿಡ್ ವೇಳೆ ಪ್ರಾಣ ಪಣಕ್ಕಿಟ್ಟು ಸೇವೆ ಸಲ್ಲಿಸಿದ 10 ಲಕ್ಷ 'ಆಶಾ'ವಾದಿಗಳಿಗೆ WHO ಗೌರವ!