ಬೆಂಗಳೂರು: ಟ್ರ್ಯಾಕ್ಟರ್ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯ ಹೆಡೆಮುರಿ ಕಟ್ಟುವಲ್ಲಿ ಬಂಡೇಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಡೇಪಾಳ್ಯದ ಮಾಲೀಕರೊಬ್ಬರ ಮನೆಯಲ್ಲಿ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ತಮಿಳುನಾಡಿನ ಕೃಷ್ಣಗಿರಿಯ ಬೊಡ್ಡಪಲ್ಲಿ ನಿವಾಸಿ ಗಣೇಶ ಅಲಿಯಾಸ್ ಗಲೀಜು ಎಂಬಾತನನ್ನು ಬಂಧಿಸಿ, ಟ್ರ್ಯಾಕ್ಟರ್ ವಶಪಡಿಸಿಕೊಳ್ಳಲಾಗಿದೆ.
ಜನವರಿ 25ರಂದು ಮಾಲೀಕನ ಟ್ರ್ಯಾಕ್ಟರ್ ಕದಿಯಲು ಮುಂದಾಗಿದ್ದ ಆರೋಪಿ ಗಣೇಶ್ ಕೊನೆ ಗಳಿಗೆಯಲ್ಲಿ ಮಂಗನಮ್ಮನಪಾಳ್ಯ ಕೆರೆ ಬಳಿ ನಿಲ್ಲಿಸಿದ್ದ ನವಾಬ್ ಜಾನ್ ಎಂಬುವವರ ಟ್ರ್ಯಾಕ್ಟರ್ನೊಂದಿಗೆ ತಮಿಳುನಾಡಿಗೆ ಪರಾರಿಯಾಗಿದ್ದ.
ನವಾಬ್ನ ಜೀವನಾಧಾರಕ್ಕೆ ಇದ್ದ ಟ್ರ್ಯಾಕ್ಟರ್ ಕಳೆದುಕೊಂಡು ಬಂಡೇಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಾಕ್ಡೌನ್ನಿಂದಾಗಿ ಆರೋಪಿಯನ್ನ ಬಂಧಿಸಲು ಸಾಧ್ಯವಾಗಿರಲಿಲ್ಲ. ಲಾಕ್ಡೌನ್ ತೆರವಾಗುತ್ತಿದ್ದಂತೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಆರೋಪಿಯು ವೃತ್ತಿಪರ ಕಳ್ಳನಾಗಿದ್ದು, ಈ ಹಿಂದೆ ಸ್ವಂತ ಊರಲ್ಲಿ ಹಲವು ಕಳ್ಳತನವೆಸಗಿ ಸಿಕ್ಕಿ ಹಾಕಿಕೊಂಡಿದ್ದ. ನಂತರ ಮಾಲೂರಿನಲ್ಲಿ ಇದೇ ರೀತಿ ಟ್ರ್ಯಾಕ್ಟರ್ ಕಳ್ಳತನ ಪ್ರಕರಣದಲ್ಲಿ ಬಂಧಿಸಲಾಗಿತ್ತು ಎಂದು ವಿಚಾರಣೆಯಲ್ಲಿ ತಿಳಿಸಿದ್ದಾನೆ.