ಬೆಂಗಳೂರು : ಹೋಟೆಲ್ನ ನಕಲಿ ದಾಖಲಾತಿ ಕೊಟ್ಟು ಸ್ವೈಪಿಂಗ್ ಮಷಿನ್ ಪಡೆದು ವಂಚಿಸುತ್ತಿದ್ದ ವಂಚಕನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ನವನೀತ್ ಪಾಂಡೆ ಬಂಧಿತ ಆರೋಪಿ. ಉತ್ತರ ಪ್ರದೇಶದ ನವನೀತ್ ಪಾಂಡೆ, ಬೆಂಗಳೂರಿನ ಬನಶಂಕರಿಯಲ್ಲಿ ಬಂದು ವಾಸವಾಗಿದ್ದನು.
ಈತ ಇಂಜಿನಿಯರಿಂಗ್ ಪದವೀಧರನಾಗಿದ್ದು, ಒಳ್ಳೆ ಕಡೆ ಕೆಲಸ ಮಾಡಿದ್ದರೇ ಉತ್ತಮ ಜೀವನ ರೂಪಿಸಿಕೊಳ್ಳಬಹುದಿತ್ತು. ಆದರೆ ತನ್ನ ಕೆಲಸವನ್ನು ಅರ್ಧಕ್ಕೆ ಬಿಟ್ಟು, ಬೇಗ ದುಡ್ಡು ಮಾಡೋಕೆ ಅಡ್ಡ ದಾರಿಯನ್ನು ಹಿಡಿದಿದ್ದ. ಜೊತೆಗೆ ಅತಿಯಾದ ಬುದ್ಧಿವಂತಿಕೆಯನ್ನು ವಂಚನೆ ಮಾಡೋದಕ್ಕೆ ಬಳಸಿಕೊಂಡು ಇದೀಗ ಮಾಡಿದ ತಪ್ಪಿಗೆ ಜೈಲು ಸೇರಿದ್ದಾನೆ.
ಈ ವಂಚನೆಗೆ ಆತ ಮಾಡಿಕೊಂಡಿದ್ದ ಪ್ಲಾನ್ ಎಂದರೆ ಪರಿಚಯಸ್ಥರ ಕ್ರೆಡಿಟ್ ಕಾರ್ಡ್ ಪಡೆದು ಅದರ ಮೂಲಕ ಲೋನ್ ಕೊಡಿಸ್ತಿದ್ದ. ಆ ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ನಗದು ಹಣ ಕೊಡ್ತಿದ್ದ. ಅಲ್ಲಿಗೆ ಬಂದ ಕಮಿಷನ್ ಹಣ ಹಾಗೂ ಕ್ರೆಡಿಟ್ ಕಾರ್ಡ್ ನ ರಿವಾರ್ಡ್ ಪಾಯಿಂಟ್ಸ್ ಅನ್ನು ನಗದು ರೂಪಕ್ಕೆ ಪರಿವರ್ತಿಸಿಕೊಂಡು ಲಾಭ ಪಡಿಯುತ್ತಿದ್ದ.
ಹೀಗೆ ಸುಮಾರು 180 ಕ್ರೆಡಿಟ್ ಕಾರ್ಡ್ ನಲ್ಲಿ ಲೋನ್ ಪಡೆದಿದ್ದಾನೆ. ಒಂದನೇ ವ್ಯಕ್ತಿ ಲೋನ್ ತೀರಿಸಲು ಎರಡನೇ ವ್ಯಕ್ತಿಯ ಕ್ರೆಡಿಟ್ ಕಾರ್ಡ್ ಬಳಸಿಕೊಳ್ತಿದ್ದ. ಹೀಗೆ 180 ಕ್ಕೂ ಹೆಚ್ಚು ಜನರಿಗೆ ಸಾಲ ಕೊಡಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು, ಕ್ರೆಡಿಟ್ ಕಾರ್ಡ್ ಬಳಸಲು ಪಿಓಎಸ್ ಮಷಿನ್ ಅಂದರೆ ಸ್ವೈಪಿಂಗ್ ಮಷಿನ್ ಕೂಡ ಬೇಕಾಗುತ್ತೆ. ಆ ಸ್ವೈಪಿಂಗ್ ಮಷಿನ್ ಅನ್ನು ಅಕ್ರಮವಾಗಿ ಪಡೆದುಕೊಂಡಿದ್ದ. ಅಂದರೆ ಬೇರೊಂದು ಹೋಟೆಲ್ ಹೆಸರಿನ ಫಾರಂ 3 ಅರ್ಜಿ ಬ್ಯಾಂಕ್ಗೆ ಸಲ್ಲಿಸುತ್ತಿದ್ದ. ಅದಕ್ಕೆ ನಕಲಿ ಸೀಲ್ ಬಳಸಿ ವಂಚಿಸುತ್ತಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಹೀಗೆ ಕಿಡಂಬೀಸ್ ಎನ್ನುವ ರೆಸ್ಟೋರೆಂಟ್ ಫಾರಂ 3 ಅರ್ಜಿ ಮತ್ತು ಸೀಲ್ ನಕಲು ಮಾಡಿದ್ದ. ಬ್ಯಾಂಕ್ ಸಿಬ್ಬಂದಿ ವೆರಿಫಿಕೇಶನ್ಗೆ ಅಂತಾ ಬಂದಾಗ ವಿಚಾರ ಗೊತ್ತಾಗಿದೆ. ಸದ್ಯ ಆರೋಪಿ ಬಳಿಯಿಂದ 220 ಕ್ಕೂ ಹೆಚ್ಚು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್, 3 ಲ್ಯಾಪ್ ಟಾಪ್, 14 ನಕಲಿ ಸೀಲ್ ಗಳು, 16 ಸ್ವೈಪಿಂಗ್ ಮಷಿನ್ ವಶಕ್ಕೆ ಪಡೆದುಕೊಂಡಿರುವ ಬನಶಂಕರಿ ಠಾಣೆ ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ : ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಿಸುವುದಾಗಿ ಕರೆ: ದೊಡ್ಡಬಳ್ಳಾಪುರದ ವ್ಯಕ್ತಿಗೆ 58 ಸಾವಿರ ರೂ ವಂಚನೆ