ಬೆಂಗಳೂರು: ಹಣ ಮಾಡಲು ಜನ ಯಾವ್ಯಾವ ಕೆಲಸ ಮಾಡುತ್ತಾರೆ ಅನ್ನುವುದನ್ನು ಉಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ನಕಲಿ ರೈಲು ಟಿಕೆಟ್ ಸೃಷ್ಟಿ ಮಾಡಿ ಮಾರಾಟ ಮಾಡುತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.
ಜಾರ್ಖಂಡ್ ಮೂಲದ ಗುಲಾಮ್ ಮುಸ್ತಾಫ್ ಬಂಧಿತ ಆರೋಪಿ. ಈತ ಸಿಲಿಕಾನ್ ಸಿಟಿಯ ರಾಜಗೋಪಾಲನಗರದಲ್ಲಿ ವಾಸ ಮಾಡುತ್ತಿದ್ದು, ಇಲ್ಲೇ ಇದ್ದುಕೊಂಡು ನಕಲಿ ಟಿಕೆಟ್ ಮಾಡಿ ಕೃತ್ಯವೆಸಗುತ್ತಿದ್ದ ಎಂಬ ಮಾಹಿತಿ ತಿಳಿದುಬಂದಿದೆ. ಈ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಬಂಧಿಸಿದ್ದಾರೆ.
ಈತ ನಕಲಿ ಎಎನ್ಎಂಎಸ್ ಸಾಫ್ಟ್‌ವೇರ್ ಅಭಿವೃದ್ಧಿ ಮಾಡಿಕೊಂಡಿದ್ದಾನೆ. ನಂತರ ಕೇಂದ್ರ ಸರ್ಕಾರದ ಐಆರ್ಸಿಟಿಸಿ (IRCTC) ನಲ್ಲಿ ನಕಲಿ ಐಡಿ ಸೃಷ್ಟಿ ಮಾಡಿ ರೈಲ್ವೆ ಇಲಾಖೆಯ ಕೆಲ ಮಾಹಿತಿ ಸಂಗ್ರಹ ಮಾಡಿ ನಕಲಿ ದಾಖಲೆಯುಳ್ಳ ಟಿಕೆಟನ್ನ 2017 ರಿಂದ ಇಲ್ಲಿಯವರೆಗೂ ಮಾರಾಟ ಮಾಡಿಕೊಂಡಿ ಬಂದಿದ್ದಾನೆ ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ.
ರೈಲ್ವೆ ಪೊಲೀಸರು, ಆರೋಪಿಯ ಬಳಿಯಿಂದ ಲ್ಯಾಪ್ ಟಾಪ್ ಹಾಗೂ ಮೊಬೈಲ್ಗಳನ್ನ ವಶಪಡಿಸಿಕೊಂಡು ಪರಿಶೀಲನೆ ಮಾಡಿದಾಗ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಈತ ಪಾಕಿಸ್ತಾನ ಮೂಲದ ಡಾರ್ಕ್ ನೆಟ್ ಮುಖಾಂತರ ನಿಷೇಧಿತ ಜಾಲತಾಣದಲ್ಲಿ ಸಕ್ರಿಯನಾಗಿದ್ದನಂತೆ. ಬಾಂಗ್ಲಾದ ಉಗ್ರರ ಜೊತೆ ,ಉತ್ತರ ಕನ್ನಡ ಜಿಲ್ಲೆಯ ಬಟ್ಕಳ ಹಾಗೂ ಒಡಿಶಾದಲ್ಲಿ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದವರ ಜೊತೆ ನಂಟು ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇನ್ನು ಸರ್ಕಾರದ ಕೆಲ ವೆಬ್ ಸೈಟ್ಗಳನ್ನು ಈತನೇ ಹ್ಯಾಕ್ ಮಾಡಿ, ಸೈಬರ್ ಉಗ್ರ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿಯೂ ಲಭ್ಯವಾಗಿದೆ. ಈ ಹಿನ್ನೆಲೆ ತನಿಖೆ ಮುಂದುವರೆದಿದೆ.