ಬೆಂಗಳೂರು: ಇತ್ತೀಚೆಗಷ್ಟೇ ಬೆಂಗಳೂರು ಹಾಗೂ ಗ್ರಾಮಾಂತರ ಭಾಗದ 60ಕ್ಕಿಂತ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಇ - ಮೇಲ್ ಸಂದೇಶ ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ನಗರದಲ್ಲಿರುವ ರಾಜಭವನಕ್ಕೆ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಸಹಾಯವಾಣಿಗೆ ಕರೆ ಮಾಡಿ ಹುಸಿ ಬಾಂಬ್ ಬೆದರಿಕೆ ಹಾಕಿದ್ದ. ಪ್ರಕರಣ ಸಂಬಂಧ ಕೇಂದ್ರ ವಿಭಾಗದ ಪೊಲೀಸರು ಕೋಲಾರ ಮೂಲದ ಭಾಸ್ಕರ್ ಎಂಬಾತನನ್ನ ಬಂಧಿಸಿ ನಗರಕ್ಕೆ ಕರೆ ತರಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ವಡ್ಡಹಳ್ಳಿಯವನಾದ ಭಾಸ್ಕರ್, ಇತ್ತೀಚೆಗೆ ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಮೇಲ್ ಬಂದ ಸುದ್ದಿಯನ್ನು ತಿಳಿದುಕೊಂಡಿದ್ದ. ಈ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದ ಬಗ್ಗೆಯೂ ತಿಳಿದುಕೊಂಡಿದ್ದ. ನಿನ್ನೆ ಊರಿನಿಂದ ಬೆಂಗಳೂರಿಗೆ ಬಂದಿದ್ದ. ಬೆಂಗಳೂರು ಪೊಲೀಸರನ್ನು ಮತ್ತೆ ಆಟವಾಡಿಸಬೇಕು ಎಂದು ನಿರ್ಧರಿಸಿದ್ದ. ಇದಕ್ಕಾಗಿ ಗೂಗಲ್ ನಲ್ಲಿ ಸರ್ಚ್ ಮಾಡಿ ಎನ್ಐಎ ನಂಬರ್ ಪಡೆದುಕೊಂಡ ನಂತರ ರಾಜಭವನಕ್ಕೆ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದ. ಬೆದರಿಕೆ ಕರೆಯಿಂದ ಗಾಬರಿಯಾದ ಎನ್ಐಎ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇನ್ನೊಂದೆಡೆ ಬೆಂಗಳೂರಿನಿಂದ ನೇರವಾಗಿ ಆಂಧ್ರದ ಚಿತ್ತೂರಿನ ದೇವಸ್ಥಾನವೊಂದಕ್ಕೆ ತೆರಳಿದ್ದ. ಬಾಂಬ್ ಬೆದರಿಕೆ ಕರೆ ನಂತರ ಕರೆ ಬಂದ ನೆಟ್ವರ್ಕ್ ಟ್ರ್ಯಾಕ್ ಮಾಡುತ್ತಿದ್ದ ಪೊಲೀಸರು ಚಿತ್ತೂರಿನಿಂದ ತನ್ನೂರಿಗೆ ವಾಪಸ್ ಬರುತ್ತಿರುವುದನ್ನ ಅರಿತು ಭಾಸ್ಕರ್ ನನ್ನ ಬಂಧಿಸಿದ್ದಾರೆ. ಸದ್ಯ ಭಾಸ್ಕರ್ ನ ವಿಧಾನಸೌಧ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಸೋಮವಾರ ರಾತ್ರಿ 11.30ರ ಸುಮಾರಿಗೆ ನಗರದ ದೊಮ್ಮಲೂರಿನಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಚೇರಿಯ ನಿಯಂತ್ರಣ ಕೊಠಡಿಗೆ ಅನಾಮಧೇಯ ಕರೆ ಮಾಡಿ ರಾಜಭವನದ ಆವರಣದಲ್ಲಿಟ್ಟಿರುವ ಬಾಂಬ್ ಕೆಲವೇ ಕ್ಷಣಗಳಲ್ಲಿ ಎಂದು ತಿಳಿಸಿ ಕರೆಯನ್ನು ಸ್ಥಗಿತಗೊಳಿಸಿದ್ದಾನೆ. ಕರೆ ಬಂದ ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದ ಎನ್‌ಐಎ ಅಕಾರಿಗಳು ಸ್ಥಳೀಯ ಪೊಲೀಸರಿಗೂ ಮಾಹಿತಿ ರವಾನಿಸಿದ್ದಾರೆ. ನಂತರ 12 ಗಂಟೆ ಸುಮಾರಿಗೆ ಪೊಲೀಸರು, ಬಾಂಬ್ ನಿಷ್ಕ್ರೀಯ ದಳ, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭಾವಿಸಿ ರಾಜಭವನದ ಸುತ್ತಮುತ್ತಾ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ದೊರೆತಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಕರೆ ಎಂದು ಗೊತ್ತಾಗಿದೆ.
ಇದನ್ನೂ ಓದಿ: ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ: ಮೇಲ್ ಐಡಿ ಬಳಕೆದಾರನ ಮಾಹಿತಿ ಕೋರಿದ ತನಿಖಾಧಿಕಾರಿಗಳು
ಇದನ್ನೂ ಓದಿ: ರಾಜಭವನದಲ್ಲಿ ಬಾಂಬ್ ಇಟ್ಟಿರೋದಾಗಿ ಬೆದರಿಕೆ ಕರೆ; ಅಲರ್ಟ್ ಆದ ಪೊಲೀಸರಿಂದ ತೀವ್ರಗೊಂಡ ತಪಾಸಣೆ