ಬೆಂಗಳೂರು: ಬದುಕು ಕಟ್ಟಿಕೊಳ್ಳಲು ಎರಡು ವರ್ಷದ ಹಿಂದೆ ಆ ದಂಪತಿ ದೂರದ ಅಸ್ಸೋಂನಿಂದ ಸಿಲಿಕಾನ್ ಸಿಟಿಗೆ ಬಂದಿದ್ದರು. ಮನೆಗೆಲಸ ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಅನ್ಯೋನ್ಯವಾಗಿದ್ದ ಗಂಡ-ಹೆಂಡತಿಯ ಜೀವನದಲ್ಲಿ ಅನುಮಾನದ ಹುಳ ಹತ್ತಿಸಿಕೊಂಡ ಪತಿರಾಯ ಪತ್ನಿ ನಡತೆಯನ್ನೇ ಶಂಕಿಸಿ ಕೊಡಲಿಯಿಂದ ಆಕೆಯ ಮುಖದ ಮೇಲೆ ಹಲ್ಲೆ ನಡೆಸಿದ್ದಾನೆ.
ಅಸ್ಸೋಂ ಮೂಲದ ಅನ್ವರಾಬೇಗಂ-ಭುಜ್ರತ್ ಆಲಿ ದಂಪತಿ 15 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ ಮೂವರು ಮಕ್ಕಳಿದ್ದಾರೆ. ಮಾರತ್ ಹಳ್ಳಿ ಠಾಣಾ ವ್ಯಾಪ್ತಿಯ ಶೆಡ್‌ನಲ್ಲಿ ಇವರು ವಾಸವಾಗಿದ್ದರು. ಅನ್ವರಾಬೇಗಂ ಅಪಾರ್ಟ್‌ಮೆಂಟ್‌ಗಳಲ್ಲಿ ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿದ್ದಳು. ಭುಜ್ರತ್ ಆಲಿ ಕೂಡಾ ಸಹ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ.
ಕುಡಿತದ ಚಟ ಅಂಟಿಸಿಕೊಂಡಿದ್ದ ಈತ, ಕೆಲ ತಿಂಗಳಿಂದ ಕೆಲಸಕ್ಕೆ ಹೋಗದೆ ಕುಡಿಯಲು ಹಣ ನೀಡುವಂತೆ ಪತ್ನಿಯನ್ನು ಪೀಡಿಸುತ್ತಿದ್ದನಂತೆ. ಅಲ್ಲದೆ ಅಕ್ಕಪಕ್ಕದ ಮನೆಯವರ ಬಳಿಯೂ ಸಲ್ಲದ ಮಾತುಗಳನ್ನು ಆಡುತ್ತಿದ್ದ. ಇದರಿಂದ ಬೇಸತ್ತ ನೆರೆಹೊರೆ ಮನೆಯವರು ಬುದ್ದಿ ಹೇಳುವಂತೆ ಅನ್ವರಾಬೇಗಂ ಹೇಳಿದ್ದರು.
ಇದೇ ವಿಚಾರಕ್ಕಾಗಿ ಪ್ರತಿನಿತ್ಯ ಇಬ್ಬರ ನಡುವೆ ಜಗಳವಾಗುತಿತ್ತು. ಕುಡಿದ ಸೋಗಿನಲ್ಲಿ ಪತ್ನಿಯ ನಡತೆ ಬಗ್ಗೆ ಅನುಮಾನಿಸಿ ಊಟ ಮಾಡಿದ ಬಳಿಕ ತನ್ನ ಪತ್ನಿಯನ್ನು ಸರಸಕ್ಕೆ ಕರೆದಿದ್ದಾನೆ. ಆದ್ರೆ ಪತಿಯೊಂದಿಗಿರಲು ಬಯಸದ ಪತ್ನಿ ಸರಸಕ್ಕೆ ನಿರಾಕರಿಸಿದ್ದಳು. ಮೊದಲೇ ಅನುಮಾನದ ಹುಳದಿಂದ ಬೇಸತ್ತಿದ್ದ ಭುಜ್ರತ್ ಅಲಿ ಕೋಪದಲ್ಲೇ ಪತ್ನಿಗೆ ಚೂಪಾದ ಆಯುಧದಿಂದ ಇರಿದು ಎಸ್ಕೇಪ್ ಆಗಲು ಯತ್ನಿಸಿದ್ದಾನೆ.
ಈ ಸಂಬಂಧ ಪತ್ನಿ ಅನ್ವರಾಬೇಗಂ ದೂರು ನೀಡಿದ್ದು, ಮಾರತ್ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೆ.ಆರ್ ಪುರಂ ರೈಲ್ವೇ ನಿಲ್ದಾಣದಲ್ಲಿ ಭುಜ್ರತ್ ಅಲಿಯನ್ನು ಬಂಧಿಸಿದ್ದಾರೆ. ಗಾಯಗೊಂಡು ಮಹಿಳೆಯನ್ನ ಸ್ಥಳೀಯ ಆಸ್ಪತ್ರೆಗೆ ಪೊಲೀಸರೇ ದಾಖಲಿಸಿದ್ದಾರೆ.
ಇದನ್ನೂ ಓದಿ: ಅಂಬರೀಶ್ ಸ್ಮಾರಕ ಮಾಡಿದ್ದು ಯಡಿಯೂರಪ್ಪ ಅಂತ ಎದೆತಟ್ಟಿ ಹೇಳಬಲ್ಲೆ: ಹಿರಿಯ ನಟ ದೊಡ್ಡಣ್ಣ