ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ನಡೆದ ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಕುಡಿದ ಮತ್ತಿನಲ್ಲಿ ಹೆಲ್ಮೆಟ್ನಿಂದ ವ್ಯಕ್ತಿಯೊಬ್ಬನ ತಲೆಗೆ ಹೊಡೆದು ಹತ್ಯೆ ಮಾಡಿದ ಆರೋಪದಡಿ ಮೂವರು ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್ ಹತ್ಯೆಗೊಳಗಾದ ಯುವಕ.
ಕೆ.ಜಿ.ಹಳ್ಳಿ ನಿವಾಸಿ ಪ್ರವೀಣ್ ಎಂಬಾತನನ್ನು ಹತ್ಯೆ ಮಾಡಿದ ಆರೋಪದಡಿ ಸುಂದರ್, ಆರುಮುಗಂ ಹಾಗೂ ಪ್ರಭು ಎಂಬುವವರನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಪ್ರವೀಣ್ ಹಾಗೂ ಆರೋಪಿಗಳೆಲ್ಲರೂ ಪರಿಚಯಸ್ಥರಾಗಿದ್ದಾರೆ. ಸಭೆ - ಸಮಾರಂಭಗಳಲ್ಲಿ ಡಿಜೆ ಹಾಗೂ ಮೈಕ್ ಅಳವಡಿಸುವ ಕೆಲಸವನ್ನು ಪ್ರವೀಣ್ ಮಾಡುತ್ತಿದ್ದರೆ, ಶಾಮಿಯಾನ ಅಂಗಡಿಯಲ್ಲಿ ಸುಂದರ್ ಹಾಗೂ ಆತನ ಸಹಚರರು ಕೆಲಸ ಮಾಡುತ್ತಿದ್ದರು.
ಲಿಂಗರಾಜಪುರ ವಿಲೇಜ್ ಬಳಿ ಊರಹಬ್ಬದ ಹಿನ್ನೆಲೆಯಲ್ಲಿ ಡಿ.ಜೆ.ಮೈಕ್ ಸೆಟ್ ಹಾಕುವ ಜವಾಬ್ದಾರಿಯನ್ನು ಪ್ರವೀಣ್ ವಹಿಸಿಕೊಂಡಿದ್ದ. ಅದೇ ರೀತಿ ಆರೋಪಿಗಳು ಶಾಮಿಯಾನ ಹಾಕುವ ಕೆಲಸದಲ್ಲಿ ನಿರತರಾಗಿದ್ದರು. ಮಂಗಳವಾರ ರಾತ್ರಿ ಡಿ.ಜೆ. ಹಾಕುವಾಗ ಕ್ಷುಲ್ಲಕ ಕಾರಣಕ್ಕಾಗಿ ಆರೋಪಿಗಳೊಂದಿಗೆ ಪ್ರವೀಣ್ ಗಲಾಟೆ ಮಾಡಿಕೊಂಡಿದ್ದ.
ಪಾನಮತ್ತರಾಗಿದ್ದ ಆರೋಪಿಗಳು ಪ್ರವೀಣ್ನೊಂದಿಗೆ ವಾಗ್ವಾದಕ್ಕಿಳಿದಿದ್ದರು. ಮಾತಿಗೆ - ಮಾತು ಬೆಳೆಯುತ್ತಿದ್ದಂತೆ ಗಲಾಟೆ ಜೋರಾಗಿದೆ. ಕೋಪದಲ್ಲಿ ಸುಂದರ್ ಹಾಗೂ ಇನ್ನಿತರ ಆರೋಪಿಗಳು ಪ್ರವೀಣ್ ಮೇಲೆ ಹಲ್ಲೆ ಮಾಡಿದ್ದರು. ಬಳಿಕ ಅಲ್ಲೇ ಇದ್ದ ಹೆಲ್ಮೆಟ್ನಿಂದ ತಲೆಗೆ ಹೊಡೆದಿದ್ದಾರೆ. ತಲೆಗೆ ಗಂಭೀರ ಪೆಟ್ಟಾಗಿ ರಕ್ತಸ್ರಾವಗೊಂಡು ಪ್ರವೀಣ್ ಕುಸಿದು ಬಿದ್ದಿದ್ದಾನೆ.
ತಕ್ಷಣವೇ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ಸೇರಿಸುವ ಮಾರ್ಗದಲ್ಲಿ ಪ್ರವೀಣ್ ಸಾವನ್ನಪ್ಪಿದ್ದಾನೆ. ಈ ಸಂಬಂಧ ಹತ್ಯೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೃತ ಪ್ರವೀಣ್ ವಿರುದ್ಧ ಕೆ.ಜಿ.ಹಳ್ಳಿ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿತ್ತು. ಹೆಲ್ಮೆಟ್ ನಿಂದ ಹೊಡೆಯುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದ ವಿಡಿಯೊ ವೈರಲ್ ಮಾಡಿದ್ದಾರೆ. ಹೀಗಾಗಿ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಹಾವೇರಿ: ಅಣ್ಣನ ಹೆಂಡತಿ, ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆಗೈದಿದ್ದ ಮೈದುನ ಅರೆಸ್ಟ್