ಬೆಂಗಳೂರು: ತಂದೆಯೇ ಮಗನನ್ನು ಬೆಂಕಿ ಹಚ್ಚಿ ಕೊಂದ ಪ್ರಕರಣದಲ್ಲಿ ಅಂತಃಕರಣ ಮಿಡಿಯುವ ಘಟನೆ ಜರುಗಿದೆ. ತಂದೆ ತನಗೆ ಬೆಂಕಿ ಹಚ್ಚಿದ್ದರೂ ಸಹ ಸಾಕಿದ ತಂದೆಯನ್ನು ಬಂಧನದಿಂದ ರಕ್ಷಿಸಲು ಪೊಲೀಸ್ ಅಧಿಕಾರಿಗಳಿಗೆ ಹಾಗೂ ವೈದ್ಯರಿಗೆ ಮಗ ಅರ್ಪಿತ್ ಸುಳ್ಳು ಹೇಳಿಕೆ ನೀಡಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ಪೊಲೀಸರೇ ಸ್ಪಷ್ಟಪಡಿಸಿದ್ದಾರೆ.
ಚಾಮರಾಜಪೇಟೆಯಲ್ಲಿ ತಂದೆಯೊಬ್ಬ ಮಗನಿಗೆ ಥಿನ್ನರ್ ಸುರಿದು ಬೆಂಕಿ ಹಚ್ಚಿ ಕೊಂದಿರುವ ಪ್ರಕರಣ ನಿನ್ನೆ ಬೆಳಕಿಗೆ ಬಂದಿತ್ತು. ಗಂಭೀರ ಸ್ವರೂಪದ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಅರ್ಪಿತ್ ಹೇಳಿಕೆ ದಾಖಲಿಸಲು ಧಾವಿಸಿದ ಪೊಲೀಸರಿಗೆ, ಕೆಲಸ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿತ್ತು ಎಂದು ಆತ ಹೇಳಿಕೆ ನೀಡಿದ್ದ.
ಇದನ್ನೂ ಓದಿ:ಅಪ್ಪಾ ಬೇಡಪ್ಪ.. ಪ್ಲೀಸ್ ಬೇಡಪ್ಪ ಅಂತಾ ಗೋಗರೆದ್ರೂ ಕರಗದ ಮನಸ್ಸು.. ಮಗನಿಗೆ ಬೆಂಕಿ ಹಚ್ಚಿ ತಂದೆ ಕ್ರೌರ್ಯ!
ಆಸ್ಪತ್ರೆಯಲ್ಲಿ ತನ್ನನ್ನು ಭೇಟಿಯಾಗಲು ಬಂದಿದ್ದ ಸ್ನೇಹಿತರ ಬಳಿಯೂ ಸಹ ನಾನು ಬದುಕಿ ಬರುತ್ತೇನೆ ಎಂದೇ ಹೇಳಿದ್ದಾನೆ. ಇದೇ ಕಾರಣಕ್ಕಾಗಿ ತಂದೆಯನ್ನು ಜೈಲಿಗೆ ಕಳುಹಿಸುವುದು ಬೇಡ ಎಂದುಕೊಂಡಿದ್ದನಂತೆ. ಆದರೆ, 6 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿದ ಅರ್ಪಿತ್ ಮೃತ್ಯು ಜಯಿಸಿ ಬರಲಾಗಲಿಲ್ಲ. ಅರ್ಪಿತ್ ಮೃತಪಟ್ಟ ಬಳಿಕ ಪ್ರತ್ಯಕ್ಷದರ್ಶಿಯೊಬ್ಬರು ಚಾಮರಾಜಪೇಟೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.