ಬೆಂಗಳೂರು: ನಿತ್ಯ ಲಕ್ಷಾಂತರ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ), ಕೊರೊನಾ ಕಾರಣಕ್ಕೆ ಸಂಪೂರ್ಣ ಸ್ಥಗಿತಗೊಂಡು ಬರ್ಬಾದ್ ಆಗಿತ್ತು. ಆದಾಯವೇ ಇಲ್ಲದ ಪರಿಣಾಮ ಖಜಾನೆ ಖಾಲಿಯಾಗಿತ್ತು. ಸಿಬ್ಬಂದಿಗೆ ಜೂನ್ ತಿಂಗಳ ವೇತನ ನೀಡಲು ನಿಗಮ ಪರದಾಡಬೇಕಾಯಿತು. ತುರ್ತು ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸಿದಕ್ಕೆ ಸರ್ಕಾರವೇ ವೇತನ ಬಿಡುಗಡೆ ಮಾಡಿತು.
ಬಿಎಂಟಿಸಿಯಲ್ಲಿ 36 ಸಾವಿರಕ್ಕೂ ಅಧಿಕ ನೌಕರರಿದ್ದು, ಕೊರೊನಾದಿಂದ 450 ಕೋಟಿಯಷ್ಟು ನಷ್ಟ ಅನುಭವಿಸಿತ್ತು. ಸಿಬ್ಬಂದಿಗೆ ಪ್ರತಿ ತಿಂಗಳು 10ರೊಳಗೆ ಪಾವತಿಯಾಗುತ್ತಿದ್ದ ವೇತನ, ದಿನಾಂಕದಲ್ಲಿ ಹೆಚ್ಚು ಕಮ್ಮಿಯಾದರೂ ಬರುತ್ತಿತ್ತು ಎನ್ನುತ್ತಾರೆ ಬಿಎಂಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಟಿ.ಅಜಿತ್.
ರಜೆ-ವೇತನ ಕಡಿತವಿಲ್ಲ: ಕೊರೊನಾಗೆ ಇಂತಹವರೇ ಗುರಿಯಾಗುತ್ತಾರೆ ಎಂಬುದಿಲ್ಲ. ಈ ನಿಟ್ಟಿನಲ್ಲಿ ಬಿಎಂಟಿಸಿ ನೂರಕ್ಕೂ ಹೆಚ್ಚು ಚಾಲಕ-ನಿರ್ವಾಹಕರಿಗೆ ಸೋಂಕು ತಗುಲಿದೆ. ಇಂತಹ ಸಮಯದಲ್ಲೂ ಸಿಬ್ಬಂದಿಗೆ ಕೊರೊನಾ ತಗುಲಿದರೆ ವಿಶೇಷ ರಜೆ ನೀಡುತ್ತಿದೆ. ಒಂದು ವೇಳೆ ಕುಟುಂಬದವರಿಗೆ ಸೋಂಕು ಕಾಣಿಸಿಕೊಂಡು ಕ್ವಾರೆಂಟೈನ್ ಆದರೆ ಅಂತಹವರಿಗೆ ಕಿಟ್ ಕೂಡ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಯಾವ ಸಿಬ್ಬಂದಿಗೂ ವೇತನ ಕಡಿತವಾಗಿಲ್ಲ.
ಕೆಲ ನೌಕರರು ಕೆಲಸಕ್ಕೆ ಬಂದರೂ ಮನೆಯಲ್ಲಿಯೇ ಇರಬಹುದು. ಅವರಿಗೆ ಗಳಿಕೆ ರಜೆ ಕೊಡುವುದಾಗಿ ಹೇಳಿ ವಾಪಸ್ ಕಳುಹಿಸಿದ್ದ ಸಂಸ್ಥೆ ನಂತರ ಗೈರು ಹಾಜರಿ ಹಾಕಿ ವೇತನ ನೀಡಿಲ್ಲ. ರಜೆ ಅರ್ಜಿ ಕೊಟ್ಟವರಿಗೂ ವೇತನ ಪಾವತಿಸದೆ ಗೈರು ಹಾಜರು ಮಾಡಲಾಗಿದೆ ಎಂದು ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಆರೋಪಿಸಿದೆ.
ಹಲವು ಬೇಡಿಕೆ ಇಟ್ಟು ನಾಲ್ಕು ನಿಗಮಗಳಿಗೆ ಪತ್ರವನ್ನು ಬರೆದಿರುವ ಸಂಘಟನೆಯು, ಲಾಕ್ಡೌನ್ ಕಾಲದ ಪೂರ್ಣ ವೇತನವನ್ನು ಎಲ್ಲಾ ನೌಕರರಿಗೂ ಕೊಡುವಂತೆ ಆಗ್ರಹಿಸಿದೆ. ಬಲವಂತವಾಗಿ ಹಾಕಿಸಿರುವ ರಜೆಗಳನ್ನು ಮತ್ತೆ ಅವರ ಖಾತೆಗೆ ವರ್ಗಾಯಿಸಬೇಕು. ಕರ್ತವ್ಯಕ್ಕೆ ಹಾಜರಾಗಿದ್ದಾರೋ ನೌಕರರಿಗೆ ಕರ್ತವ್ಯ ಸಿಗದಿದ್ದರೆ, ಅವರೆಲ್ಲರಿಗೂ ಹಾಜರಾತಿ ನೀಡಬೇಕು. ಕೊರೊನಾದಿಂದ ಮೃತಪಟ್ಟ ಎಲ್ಲ ನೌಕರರ ಕುಟಂಬಕ್ಕೆ ₹ 30 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.