ಬೆಂಗಳೂರು : "ರಾಜ್ಯದಲ್ಲಿ ನಡೆಯುತ್ತಿರುವ ಸೈಬರ್ ಕ್ರೈಂ ತಡೆಗೆ ಗೃಹ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಎಲ್ಲಾ ಜಿಲ್ಲೆಯಲ್ಲೂ ಸೈಬರ್ ಸೆಲ್ ತೆರೆಯಲಾಗಿದೆ. ಜನತೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಈಗ ಕ್ರೈಂ ರೀತಿ ನೀತಿ ಬದಲಾವಣೆ ಆಗಿದೆ. ಹಿಂದೆ ಮಾಡುತ್ತಿದ್ದಂತೆ ಹೆದ್ದಾರಿ ಲೂಟಿ, ಮನೆ ಲೂಟಿಯಂತಹ ಶ್ರಮ ಪಡಲ್ಲ. ಸೈಬರ್ ಕ್ರೈಂ ಮಾಡುತ್ತಿದ್ದಾರೆ. ತಂತ್ರಜ್ಞಾನ ಬಳಸಿ ಲೂಟಿ ಮಾಡಲಾಗುತ್ತಿದೆ. ಇದರ ತಡೆಗೆ ಪೊಲೀಸ್ ಪ್ರಯತ್ನ ನಡೆಯುತ್ತಿದೆ. ಸಿಮ್ ಕಾರ್ಡ್ ಮಾರಾಟಕ್ಕೆ ಹಲವು ವಿಧಾನ ಅಳವಡಿಸಲಾಗಿದೆ. ಸಿಐಡಿ ವಿಭಾಗದಲ್ಲಿ ಸೈಬರ್ ಸೆಲ್ ತೆರೆಯಲಾಗಿದೆ. ಸಿಮ್ಗೆ ಆಧಾರ್ ಕಡ್ಡಾಯ ಕೇಂದ್ರ ಮಾಡಬೇಕಿದೆ. ಆದರೆ ಸೈಬರ್ ಅಪರಾಧ ತಡೆಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ" ಎಂದರು.
"ಆರ್ಬಿಐ, ಪೊಲೀಸ್, ಬ್ಯಾಂಕಿಂಗ್ ಅಧಿಕಾರಿಗಳ ಸಭೆ ನಡೆಸಿ ಹಲವು ಸುರಕ್ಷಾ ಕ್ರಮಕ್ಕೆ ಮುಂದಾಗಿದೆ. ಸೈಬರ್ ಅಪರಾಧ ಪತ್ತೆಗೆ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ. ಆದರೂ ಜನರು ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಬಳಕೆದಾರರು ಎಚ್ಚರಿಕೆಯಿಂದ ಮೊಬೈಲ್ ಬಳಕೆ ಮಾಡಬೇಕು" ಎಂದು ಸಲಹೆ ನೀಡಿದರು.
"ಎಲ್ಲಾ ಜಿಲ್ಲೆ ಸೇರಿ 45 ಸೈಬರ್ ಠಾಣೆ ತೆರೆಯಲಾಗಿದೆ. ಸಿಐಡಿಯಲ್ಲಿ ವಿಶೇಷ ಘಟಕ ತೆರೆಯಲಾಗಿದೆ. ವಿದೇಶದಲ್ಲಿ ಕುಳಿತು ಹಣ ಲಪಟಾಯಿಸಲಾಗುತ್ತಿದೆ. ಹೊರರಾಜ್ಯದ ಹಳ್ಳಿಯಲ್ಲಿ ಕುಳಿತು ಇಂತಹ ಕೃತ್ಯ ಮಾಡಲಾಗುತ್ತಿದೆ. ಅಲ್ಲಿಂದಲೂ ಸಾಕಷ್ಟು ಜನರನ್ನ ಬಂಧಿಸಿ ಕರೆ ತರಲಾಗಿದೆ" ಎಂದರು.
"ಒಬ್ಬ ವ್ಯಕ್ತಿ ಗರಿಷ್ಠ 9 ಸಿಮ್ ಕಾರ್ಡ್ ಪಡೆಯಬಹುದು ಎನ್ನುವ ನಿಯಮ ಇದೆ. ಆಧಾರ್ ಲಿಂಕ್ ಮಾಡಬೇಕಿದೆ. ಎಲ್ಲವನ್ನೂ ಕಟ್ಟುನಿಟ್ಟಾಗಿ ಅಳವಡಿಸಿಕೊಂಡು ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗುತ್ತದೆ" ಎಂದು ತಿಳಿಸಿದರು.
ಮಹಿಳೆ, ಮಕ್ಕಳ ದೌರ್ಜನ್ಯ ತಡೆಗೆ ಆದ್ಯತೆ: "ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇದಕ್ಕಾಗಿ ನಮ್ಮ ಸರ್ಕಾರ ವಿಶೇಷ ಆದ್ಯತೆ ನೀಡಲಿದೆ" ಎಂದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಕೆ.ಗೋವಿಂದರಾಜ್ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಗ್ರಾಮೀಣ ಪ್ರದೇಶದಲ್ಲಿ 30 ನಿಮಿಷ, ನಗರದಲ್ಲಿ 15 ನಿಮಿಷದಲ್ಲಿ ಪಿಂಕ್ ಹೊಯ್ಸಳ ಅಪರಾಧ ಕೃತ್ಯ ಸ್ಥಳ ತಲುಪಲಿದೆ. ವಿವಿಧ ಜಿಲ್ಲೆಯಲ್ಲಿ ಮಹಿಳಾ ಪೊಲೀಸ್ ಪಡೆ ರಚಿಸಲಾಗಿದೆ. ಸ್ವಯಂ ರಕ್ಷಣೆ ಮಾಡಿಕೊಳ್ಳಲು ವಿದ್ಯಾರ್ಥಿನಿಯರಿಗೆ ಪೊಲೀಸ್ ಕಡೆಯಿಂದ ತರಬೇತಿ ಕೊಡಲಾಗುತ್ತದೆ.
3200 ಸ್ಥಳದಲ್ಲಿ 7500 ಸಿಸಿಟಿವಿ ಅಳವಡಿಕೆ ಬೆಂಗಳೂರಿನಲ್ಲಿ ಮಾಡಲಾಗುತ್ತಿದೆ. ಈಗಾಗಲೇ 4 ಸಾವಿರ ಅಳವಡಿಕೆ ಮಾಡಲಾಗಿದೆ. ಯಾರೂ ದೌರ್ಜನ್ಯ ಎಸಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪ್ರಕರಣ ನಡೆದು 60 ದಿನದಲ್ಲಿ ಆರೋಪಪಟ್ಟಿ ಸಲ್ಲಿಸಲು ಕ್ರಮ, ಮಹಿಳಾ ಮತ್ತು ಮಕ್ಕಳ ರಕ್ಷಣೆಗೆ ನಮ್ಮ ಸರ್ಕಾರ ವಿಶೇಷ ಆದ್ಯತೆ ನೀಡಲಿದೆ ಎಂದು ಹೇಳಿದರು.
ಭಗವಾನ್ ನಿಧನಕ್ಕೆ ಸಂತಾಪ: ಹಿರಿಯ ನಿರ್ದೇಶಕ ಎಸ್.ಕೆ.ಭಗವಾನ್ ನಿಧನಕ್ಕೆ ವಿಧಾನ ಪರಿಷತ್ನಲ್ಲಿ ಸಂತಾಪ ಸೂಚಿಸಲಾಯಿತು. ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಸಂತಾಪ ಸೂಚನೆ ಮಂಡಿಸಿದರು. ಕನ್ನಡ ಚಿತ್ರರಂಗಕ್ಕೆ ಭಗವಾನ್ಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಸಂತಾಪ ಸೂಚನೆಯನ್ನು ಬೆಂಬಲಿಸಿದ ಸಚಿವ ಅಶ್ವತ್ಥ್ನಾರಾಯಣ್ ಹಾಗು ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಭಗವಾನ್ ಕಾದಂಬರಿ ಆಧಾರಿತ ಸಿನಿಮಾಗಳ ಆದರ್ಶವನ್ನು ಮೆಲುಕು ಹಾಕಿದರು. ನಂತರ ಒಂದು ನಿಮಿಷ ಮೌನಾಚರಿಸುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಇದನ್ನೂ ಓದಿ: ಭಗವಾನ್ ನಿಧನಕ್ಕೆ ಸಂತಾಪ ಸೂಚಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಸಿಎಂ ಸಿದ್ದರಾಮಯ್ಯ