ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿ ಎಂ. ಮಹೇಶ್ವರ್ ರಾವ್ ಅವರಿಗೆ ಏಕಕಾಲಕ್ಕೆ ಕಾರ್ಮಿಕ ಇಲಾಖೆ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆ ಉಸ್ತುವಾರಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಐಎಎಸ್ ಅಧಿಕಾರಿ ಮಹೇಶ್ವರ್ ರಾವ್ ಅವರನ್ನು ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸರ್ಕಾರ ಇತ್ತೀಚಿಗೆ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಜತೆಗೆ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಸ್ತುವಾರಿಯನ್ನು ಇವರಿಗೆ ವಹಿಸಿತ್ತು. ಸರ್ಕಾರ ಹೀಗೆ ಏಕಕಾಲಕ್ಕೆ ಎರಡು ಇಲಾಖೆಗಳ ನಿರ್ವಹಣೆ ನೀಡಿರುವುದು ಸಾರ್ವಜನಿಕ ಹಿತಾಸಕ್ತಿ ಹಾಗೂ ಸಹಜ ನ್ಯಾಯದ ತತ್ವಗಳಿಗೆ ತದ್ವಿರುದ್ಧವಾದದ್ದು ಎಂದು ಆಕ್ಷೇಪಿಸಿ ಕಾನೂನು ವಿದ್ಯಾರ್ಥಿ ಬಾಗ್ಳೆಕರ್ ಆಕಾಶ್ ಕುಮಾರ ಎಂಬಾತ ಅರ್ಜಿ ಸಲ್ಲಿಸಿದ್ದರು.
ನಿಯೋಜನೆ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ನ್ಯಾ. ಕೆ.ಎನ್. ಫಣೀಂದ್ರ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ಅರ್ಜಿಯನ್ನು ಕೇವಲ ಊಹೆ ಮತ್ತು ಅನುಮಾನಗಳ ಆಧಾರದ ಮೇಲೆ ಸಲ್ಲಿಸಲಾಗಿದೆ ಎಂದು ಅಭಿಪ್ರಾಯಪಟ್ಟು, ವಜಾಗೊಳಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಒಬ್ಬ ನಾಗರಿಕ ಸೇವಾ ಅಧಿಕಾರಿಗೆ ಏಕಕಾಲಕ್ಕೆ ಎರಡು ಇಲಾಖೆಗಳ ಹೊಣೆ ನೀಡುವುದು ಸಾರ್ವಜನಿಕ ಹಿತಾಸಕ್ತಿ ಅಥವಾ ಸಹಜ ನ್ಯಾಯ ತತ್ವಗಳಿಗೆ ತದ್ವಿರುದ್ಧವಾಗಿದೆ ಎಂದು ಹೇಳಲಿಕ್ಕೆ ಬರುವುದಿಲ್ಲ. ಅಷ್ಟಕ್ಕೂ ಒಬ್ಬ ಐಎಎಸ್ ಅಧಿಕಾರಿ ಎರಡು ಇಲಾಖೆಗಳ ಹೊಣೆ ನಿರ್ವಹಿಸಬಹುದೇ ಎಂದು ತೀರ್ಮಾನಿಸುವ ಅಧಿಕಾರ ರಿಟ್ ಅರ್ಜಿ ವ್ಯಾಪ್ತಿಗೆ ಬರುವುದಿಲ್ಲ. ಇದು ದಂಡ ವಿಧಿಸಲು ಅರ್ಹವಾದ ಪ್ರಕರಣ. ಅದರೆ, ಅರ್ಜಿದಾರ ಕಾನೂನು ವಿದ್ಯಾರ್ಥಿ ಆಗಿರುವುದರಿಂದ ನ್ಯಾಯಾಲಯ ಕಠಿಣ ಆದೇಶ ನೀಡುವುದಿಲ್ಲ ಎಂದು ಹೇಳಿದೆ.