ಬೆಂಗಳೂರು: ವಿಚ್ಛೇದಿತ ಪುರುಷ ಅಥವಾ ಮಹಿಳಾ ಸರ್ಕಾರಿ ನೌಕರರು ಸೇವೆಯಲ್ಲಿರುವಾಲೇ ಮೃತಪಟ್ಟ ಸಂದರ್ಭಗಳಲ್ಲಿ ಹಾಗೂ ಅವರಿಗೆ ಮಕ್ಕಳಿಲ್ಲದಿದ್ದಲ್ಲಿ, ಅವರ ಸಹೋದರ ಅಥವಾಸಹೋದರಿಯನ್ನು ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಬಹುದು ಎಂದು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಸ್ಪಷ್ಟಪಡಿಸಿದೆ.
ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಇಲಾಖೆ, ವಿಚ್ಛೇದಿತ ಸರ್ಕಾರಿ ನೌಕರರು ಮೃತಪಟ್ಟಿದ್ದು, ಅವರಿಗೆ ಮಕ್ಕಳಿಲ್ಲದ ಸಂದರ್ಭಗಳಲ್ಲಿ, ಅವಿವಾಹಿತ ಸರ್ಕಾರಿ ನೌಕರರ ಪ್ರಕರಣಗಳಲ್ಲಿ ಅನ್ವಯವಾಗುವಂತೆ ಅವರ ಸಹೋದರ, ಸಹೋದರಿಗೆ ಅನುಕಂಪದ ಆಧಾರದ ನೇಮಕಾತಿಯನ್ನು ನೀಡಬಹುದೇ ಎಂಬ ಬಗ್ಗೆ ಹಲವು ಇಲಾಖೆಗಳು ಸ್ಪಷ್ಟೀಕರಣ ಕೋರಿದ್ದವು. ಈ ಹಿನ್ನೆಲೆ ಸ್ಪಷ್ಟೀಕರಣ ನೀಡಿರುವ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ, ಅಂತಹ ಸರ್ಕಾರಿ ನೌಕರರನ್ನು ಅವಿವಾಹಿತ ಸರ್ಕಾರಿ ನೌಕರರಿಗೆ ಸಮಾನವಾಗಿ ಪರಿಗಣಿಸಿ, ಮೃತ ನೌಕರರ ಮೇಲೆ ಅವಲಂಬಿತರಾಗಿದ್ದ ಹಾಗೂ ಅವರೊಂದಿಗೆ ವಾಸಿಸುತ್ತಿದ್ದ ಅವರ ಸಹೋದರ ಸಹೋದರಿಗೆ ನಿಯಮಗಳ ಷರತ್ತು ಅಥವಾ ನಿಬಂಧನೆಗಳನ್ನು ಪೂರೈಸುವ ಷರತ್ತಿಗೊಳಪಟ್ಟು ಅನುಕಂಪದ ಆಧಾರದ ನೇಮಕಾತಿಗೆ ಪರಿಗಣಿಸಬಹುದೆಂದು ಸ್ಪಷ್ಟಪಡಿಸಿದೆ.
ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996 ರನ್ವಯ ಸೇವೆಯಲ್ಲಿರುವಾಗಲೇ ಮೃತಪಟ್ಟ ಸರ್ಕಾರಿ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ವಿವಾಹಿತ ಹಾಗೂ ಅವಿವಾಹಿತ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭದಲ್ಲಿ ಅನುಕಂಪದ ಆಧಾರದ ನೇಮಕಾತಿ ಪಡೆಯಲು ಅರ್ಹರಾದ ಅವಲಂಬಿತರ ಬಗ್ಗೆ ತಿಳಿಸಲಾಗಿದೆ. ಇದರನ್ವಯ, ವಿವಾಹಿತ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭಗಳಲ್ಲಿ ಅವರ ಪತಿ, ಪತ್ನಿ, ಮಗ ಮತ್ತು ಮಗಳು ಹಾಗೂ ಅವಿವಾಹಿತ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭಗಳಲ್ಲಿ ಅವರ ಸಹೋದರ, ಸಹೋದರಿ, ಅನುಕಂಪದ ಆಧಾರದ ನೇಮಕಾತಿಗೆ ಅರ್ಹರಾಗಿರುತ್ತಾರೆ.
ಇನ್ನು ವಿಚ್ಛೇದಿತ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭದಲ್ಲಿ ಅವರ ಪತ್ನಿ ಅಥವಾ ಪತಿ ಕಾನೂನಾತ್ಮಕವಾಗಿ ನೌಕರರಿಂದ ಬೇರ್ಪಡುವುದರಿಂದ, ಅವರಿಗೆ ಅನುಕಂಪದ ಆಧಾರದ ನೇಮಕಾತಿ ನೀಡಲು ಅವಕಾಶವಿಲ್ಲ. ಆದರೂ ವಿಚ್ಛೇದಿತ ನೌಕರರ ಮಕ್ಕಳು ಅವರಿಗೆ ಅಲವಂಬಿತರಾಗಿದ್ದಲ್ಲಿ ಹಾಗೂ ಅವರೊಂದಿಗೆ ವಾಸಿಸುತ್ತಿದ್ದಲ್ಲಿ, ಅವರಿಗೆ ಅನುಕಂಪದ ಆಧಾರದ ನೇಮಕಾತಿಯನ್ನು ನೀಡಬಹುದಾಗಿದೆ.
ವಿಚ್ಚೇದಿತ ಸರ್ಕಾರಿ ನೌಕರರು ಸೇವೆಯಲ್ಲಿರುವಾಗಲೇ ಮೃತಪಟ್ಟು ಅವರಿಗೆ ಮಕ್ಕಳಿದ್ದಲ್ಲಿ ಅಂತಹ ಮಕ್ಕಳು ನೌಕರರಿಗೆ ಅವಲಂಬಿತರಾಗಿದ್ದು ಹಾಗೂ ಅವರೊಂದಿಗೆ ವಾಸಿಸುತ್ತಿದ್ದಲ್ಲಿ ಅನುಕಂಪದ ಆಧಾರದ ನೇಮಕಾತಿಗೆ ಅರ್ಹರಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ ವಿಚ್ಛೇದಿತ ನೌಕರರ ಸಹೋದರ ಸಹೋದರಿ ಅನುಕಂಪದ ಆಧಾರದ ನೇಮಕಾತಿಗೆ ಅರ್ಹರಾಗುವುದಿಲ್ಲ.
ವಿಚ್ಚೇದಿತ ಪುರುಷ ಅಥವಾ ಮಹಿಳಾ ಸರ್ಕಾರಿ ನೌಕರರು ಸೇವೆಯಲ್ಲಿರುವಾಲೇ ಮೃತಪಟ್ಟ ಸಂದರ್ಭಗಳಲ್ಲಿ ಹಾಗೂ ಅವರಿಗೆ ಮಕ್ಕಳಿಲ್ಲದಿದ್ದಲ್ಲಿ, ಅಂತಹ ಸರ್ಕಾರಿ ನೌಕರರನ್ನು ಅವಿವಾಹಿತ ಸರ್ಕಾರಿ ನೌಕರರಿಗೆ ಸಮಾನವಾಗಿ ಪರಿಗಣಿಸಿ, ಮೃತ ನೌಕರರ ಮೇಲೆ ಅವಲಂಬಿತರಾಗಿದ್ದ ಹಾಗೂ ಅವರೊಂದಿಗೆ ವಾಸಿಸುತ್ತಿದ್ದ ಅವರ ಸಹೋದರ ಸಹೋದರಿಗೆ ನಿಯಮಗಳ ಷರತ್ತು ಅಥವಾ ನಿಬಂಧನೆಗಳನ್ನು ಪೂರೈಸುವ ಷರತ್ತಿಗೊಳಪಟ್ಟು ಅನುಕಂಪದ ಆಧಾರದ ನೇಮಕಾತಿಗೆ ಪರಿಗಣಿಸಬಹುದೆಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ನೌಕರರು ಅವಲಂಬಿತರನ್ನು ಪೋಷಿಸದಿದ್ದರೆ ಅನುಕಂಪ ನೇಮಕ ವಾಪಸ್: ಹೈಕೋರ್ಟ್ ತೀರ್ಪು