ಬೆಂಗಳೂರು: ಲೋಕೋಪಯೋಗಿ ಹಾಗೂ ಜಲಸಂಪನ್ಮೂಲ ಇಲಾಖೆಗೆ ಸೇರಿದ 49 ಮಂದಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ವಿಭಾಗ-1)ಗಳನ್ನು ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ, ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರಿಗೆ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಸರ್ಕಾರ ಆದೇಶಿಸಿದೆ.
ಎರವಲು ಸೇವೆಯ ಮೇಲೆ ನೇಮಿಸಲು ಅಧಿಕಾರಿಗಳು ಆಯಾ ಇಲಾಖೆಗಳಲ್ಲಿ ಮರು ಸ್ಥಳ ನಿಯುಕ್ತಿ ಕೋರಿ ತಕ್ಷಣ ವರದಿ ಮಾಡಿಕೊಳ್ಳಬೇಕು. ಲಿಖಿತ ರೂಪದಲ್ಲಿ ವರದಿ ಮಾಡಿ ಕೊಳ್ಳದಿದ್ದಲ್ಲಿ ಕಡ್ಡಾಯ ನಿರೀಕ್ಷಣಾ ಅವಧಿ ಮಂಜೂರು ಮಾಡಲಾಗುವುದಿಲ್ಲ. ಆ ಅವಧಿಯನ್ನು ಅನಧಿಕೃತ ಗೈರು ಹಾಜರಿ ಎಂದು ಪರಿಗಣಿಸಲಾಗುವುದು ಎಂದು ತಿಳಿಸಲಾಗಿದೆ.
ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ವತಂತ್ರ ಪ್ರಭಾರದಲ್ಲಿರಿಸಿ ಸ್ಥಳ ನಿಯುಕ್ತಿಗೊಳಿಸಲಾದ ಅಭಿಯಂತರುಗಳಿಗೆ ಸಂಬಂಧಪಟ್ಟ ಇಲಾಖೆಗಳು ಮರುಸ್ಥಳ ನಿಯುಕ್ತಿ ಆದೇಶ ನೀಡುವವರೆಗೆ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗಳಿಂದ ಬಿಡುಗಡೆ ಮಾಡತಕ್ಕದ್ದಲ್ಲ. ಸ್ಥಳ ನಿಯುಕ್ತಿಗೊಳಿಸಲಾದ ಹುದ್ದೆಗಳಲ್ಲಿ ವರದಿ ಮಾಡಿಕೊಳ್ಳದೆ ಹಾಗೂ ಎರವಲು ಸೇವೆಯ ಮೇಲೆ ನೀಡಿದ ಅಧಿಕಾರಿಗಳು ಆಯಾ ಇಲಾಖೆಗಳಿಗೆ ಮರು ಸ್ಥಳ ನಿಯುಕ್ತಿ ಆದೇಶ ನೀಡಿದ ನಂತರವೂ ಮರು ಸ್ಥಳ ನಿಯುಕ್ತಿಗೊಳಿಸಲಾದ ಹುದ್ದೆಗಳಲ್ಲಿ ವರದಿ ಮಾಡಿಕೊಳ್ಳದೆ.
ಸ್ಥಳನಿಯುಕ್ತಿ ಮಾರ್ಪಾಡಿಗೆ ಪ್ರಯತ್ನಿಸಿದಲ್ಲಿ ಅಥವಾ ಈ ಬಗ್ಗೆ ರಾಜಕೀಯ ಒತ್ತಡ ತಂದಲ್ಲಿ, ಅವರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸೂಚನೆ ನೀಡಿದೆ. ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಸ್ವತಂತ್ರ ಪ್ರಭಾರದಲ್ಲಿ ಆರಿಸಲಾಗಿರುವ ಅಧಿಕಾರಿಗಳು ಸ್ವತಂತ್ರ ಪ್ರಭಾರದಲ್ಲಿರಿಸಲಾಗಿರುವ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ವೇತನದ ಶೇ7.5ರಷ್ಟು ಪ್ರಭಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.