ಬೆಂಗಳೂರು: ನಿಗಮ, ಮಂಡಳಿಗಳ ನೇಮಕ ಪಟ್ಟಿ ಅಗತ್ಯವಾಗಿ ಆಗಬೇಕು. ಅದು ಶೀಘ್ರವೇ ಆಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ಕೆಲವು ಶಾಸಕರಿಗೆ ನೀಡಿದರೆ ಉಳಿದ ಶಾಸಕರು, ಕಾರ್ಯಕರ್ತರಿಗೆ ಬೇಸರವಾಗುತ್ತದೆ. ಶಾಸಕರನ್ನಷ್ಟೇ ಆಯ್ಕೆ ಮಾಡಿದರೆ ಕಾರ್ಯಕರ್ತರು ಬೇಸರಗೊಳ್ಳುತ್ತಾರೆ. ಈಗಾಗಲೇ ಈ ಬಗ್ಗೆ ಎಲ್ಲರ ಜೊತೆ ಮಾತುಕತೆ ನಡೆದಿದೆ ಎಂದರು.
ಕಾಂಗ್ರೆಸ್ನಲ್ಲಿ ಅಜಿತ್ ಪವಾರ್, ಶಿಂಧೆ ಅಂಥರಿದ್ದಾರೆ. ಅವರು ಯಾವಾಗ ಪಕ್ಷದಿಂದ ಹೊರಬರುತ್ತಾರೆ ಎನ್ನುವುದು ಗೊತ್ತಿಲ್ಲ ಎನ್ನುವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕುಮಾರಸ್ವಾಮಿ ಕನಸು ಕಾಣುತ್ತಿದ್ದಾರೆ. ಕನಸು ಕಾಣೋದು ತಪ್ಪು ಅಂತ ಹೇಳಲು ಆಗುವುದಿಲ್ಲ. ಅವರ ಯಾವ ಕನಸು ಕೂಡ ನನಸಾಗಲ್ಲ ಎಂದು ತಿರುಗೇಟು ನೀಡಿದರು.
ದೇವೇಗೌಡರ ಕುಟುಂಬ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿರುವ ಕುರಿತು ಮಾತನಾಡಿ, ಜೆಡಿಎಸ್ ನಮ್ಮ ಜೊತೆ ಮೈತ್ರಿ ಮಾಡಿಕೊಂಡಿತ್ತು. ಆಗ ಜೆಡಿಎಸ್ ಕಾರ್ಯಕರ್ತರು ನಮಗೆ ಮತ ಹಾಕಲಿಲ್ಲ. ನಮ್ಮ ಕಾರ್ಯಕರ್ತರು ಜೆಡಿಎಸ್‌ಗೆ ಮತ ಹಾಕಲಿಲ್ಲ. ಬಿಜೆಪಿಯವರಿಗೂ ಅದೇ ರೀತಿ ಆಗಲಿದೆ ಎಂದು ಭವಿಷ್ಯ ನುಡಿದರು.
ಇದನ್ನೂ ಓದಿ: ಕೆಕೆಆರ್ಟಿಸಿ ಸಿಬ್ಬಂದಿಗೆ ₹1.20 ಕೋಟಿ ಮೊತ್ತದ ಅಪಘಾತ ಪರಿಹಾರ ವಿಮಾ ಯೋಜನೆ