ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಹುದ್ದೆಗೆ ಪ್ರೊ. ಕೊಟ್ರೇಶ್ ಅವರನ್ನು ನೇಮಕ ಮಾಡಿರುವ ಆದೇಶ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.ಈ ಕುರಿತು ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಆರೀಫ್ ಜಮೀಲ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕರ್ನಾಟಕ ವಿಶ್ವವಿದ್ಯಾಲಯಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಕಾಯ್ದೆ-2020 ರ ಸೆಕ್ಷನ್ 10ರ ಪ್ರಕಾರ ವಿವಿಗೆ ಶಿಕ್ಷಕ ಸಿಬ್ಬಂದಿಯನ್ನು ರಿಜಿಸ್ಟ್ರಾರ್ ಆಗಿ ನೇಮಿಸುವಂತಿಲ್ಲ. ಹಾಗಿದ್ದರೂ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರೊ. ಎಂ ಕೊಟ್ರೇಶ್ ಅವರನ್ನು ಬೆಂಗಳೂರು ವಿವಿ ಕುಲಸಚಿವರಾಗಿ ನೇಮಕ ಮಾಡಲಾಗಿದೆ. ಇದು ನಿಯಮಬಾಹಿರ. ಆದ್ದರಿಂದ, ಅರ್ಜಿದಾರರರ ನೇಮಕವನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿದರು.
ಇದನ್ನೂ ಓದಿ: ಮಾಜಿ ಕಾರ್ಪೊರೇಟರ್ ಮನೆಯಲ್ಲಿ ಗುಂಡಿನ ಸದ್ದು: ಅಣ್ಣನ ಗದರಿಸಿದ್ದಕ್ಕೆ ಪಿಸ್ತೂಲ್ ಕೈಗೆತ್ತಿಕೊಂಡ ತಮ್ಮ
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸೇವಾ ವಿಷಯಗಳಲ್ಲಿ ಪಿಐಎಲ್ ಪರಿಗಣಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಅರ್ಜಿದಾರ ವಕೀಲರು, ರೇಣುಕಾಂಬಿಕೆ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ ಪ್ರಕರಣದಲ್ಲಿ ಸೇವಾ ವಿಷಯವನ್ನೂ ಪರಿಗಣಿಸಲಾಗಿದೆ. ಹಾಗೆಯೇ, ಇದು ಟ್ರಾನ್ಸಫರ್ ವಿಷಯವಲ್ಲ. ಅರ್ಹತೆ ಇಲ್ಲದವರನ್ನು ವಿವಿಯ ಪ್ರಮುಖ ಹುದ್ದೆಗೆ ನೇಮಿಸಿರುವ ಪ್ರಕರಣ. ಆದ್ದರಿಂದ ಅರ್ಜಿ ಪರಿಗಣಿಸಬೇಕು ಎಂದು ಕೋರಿದರು. ಇದಕ್ಕೆ ಒಪ್ಪದ ಪೀಠ ಸೇವಾ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಪಿಐಎಲ್ ಆಗಿ ಪರಿಗಣಿಸಲಾಗದು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.
ಪ್ರಕರಣದ ಹಿನ್ನೆಲೆ:
ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯು ಕರ್ನಾಟಕ ಸಂಸ್ಕೃತ ವಿವಿ ರಿಜಿಸ್ಟ್ರಾರ್ ಆಗಿದ್ದ ಪ್ರೊ. ಎಂ ಕೊಟ್ರೇಶ್ ಅವರನ್ನು 2021ರ ನವೆಂಬರ್ 26ರಂದು ಬೆಂಗಳೂರು ವಿವಿ ರಿಜಿಸ್ಟ್ರಾರ್ ಹುದ್ದೆಗೆ ವರ್ಗಾವಣೆ ಮಾಡಿ ಆದೇಶಿಸಿತ್ತು. ಇದು ನಿಯಮಬಾಹಿರ. ಕರ್ನಾಟಕ ವಿಶ್ವವಿದ್ಯಾಲಯಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಕಾಯ್ದೆ-2020 ರ ಸೆಕ್ಷನ್ 10ರ ಪ್ರಕಾರ ಯಾವುದೇ ವಿವಿಗೆ ಐಎಎಸ್ ಅಥವಾ ಕೆಎಎಸ್ ಶ್ರೇಣಿಯ ಹಿರಿಯ ಅಧಿಕಾರಿಯನ್ನು ಮಾತ್ರ ರಿಜಿಸ್ಟ್ರಾರ್ ಆಗಿ ನೇಮಕ ಮಾಡಬೇಕು. ಆದರೆ, ಶಿಕ್ಷಕ ಸಿಬ್ಬಂದಿಯಾಗಿರುವ ಪ್ರೊ. ಎಂ ಕೊಟ್ರೇಶ್ ಅವರನ್ನು ರಿಜಿಸ್ಟ್ರಾರ್ ಆಗಿ ನೇಮಕ ಮಾಡಿರುವುದು ಸರಿಯಲ್ಲ. ಆದ್ದರಿಂದ ಅವರ ನೇಮಕಾತಿಯನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.