ಬೆಂಗಳೂರು : ನಗರದ ಮಲ್ಲೇಶ್ವರಂನಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ನಿರ್ಮಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಂತ್ರಿಮಾಲ್ ಕಟ್ಟಡವನ್ನು ತೆರವು ಮಾಡುವುದಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿರುವ ಹೈಕೋರ್ಟ್, ಒತ್ತುವರಿ ಜಾಗವನ್ನು ಅಳತೆ ಮಾಡಲು ಯಾವುದೇ ತಕರಾರು ಇಲ್ಲ ಎಂದು ತಿಳಿಸಿದೆ.
ಸರ್ಕಾರಿ ಜಾಗ ಒತ್ತುವರಿ ಮಾಡಿ ನಿರ್ಮಿಸಿರುವ ಮಂತ್ರಿಮಾಲ್ ಪ್ರದೇಶವನ್ನು ಬಿಬಿಎಂಪಿ ಸ್ವತ್ತು ಎಂದು ಘೋಷಿಸಿರುವ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಮತ್ತು ಸಕ್ಷಮ ಪ್ರಾಧಿಕಾರಿಯವರ ನ್ಯಾಯಾಲಯದ ಆದೇಶ ಪ್ರಶ್ನಿಸಿ, ಮಂತ್ರಿ ಮಾಲ್ ಮತ್ತು ಮಂತ್ರಿಗ್ರೀನ್ ಒಡೆತನ ಹೊಂದಿರುವ ಹಮಾರಾ ಶೆಲ್ಟರ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದೆ.
ಈ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್, ಮಂತ್ರಿಮಾಲ್ ತೆರವು ಕಾರ್ಯಾಚರಣೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಆದರೆ, ತೆರವು ಕಾರ್ಯಾಚರಣೆ ಅಂಗವಾಗಿ ಬಿಬಿಎಂಪಿ ಅಧಿಕಾರಿಗಳು ವಿವಾದಿತ ಪ್ರದೇಶವನ್ನು ಸರ್ವೆ ಮಾಡಿ, ಒತ್ತುವರಿ ಭೂಮಿ ಗುರುತಿಸಲು ಯಾವುದೇ ಅಡ್ಡಿಯಿಲ್ಲ. ಹೀಗಾಗಿ ಅಧಿಕಾರಿಗಳು ಸರ್ವೆ ಕೆಲಸ ಮುಂದುವರೆಸಬಹುದು ಎಂದು ನಿರ್ದೇಶಿಸಿ, ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿದೆ.
ಪ್ರಕರಣದ ಹಿನ್ನೆಲೆ ಮಲ್ಲೇಶ್ವರಂ ಸಂಪಿಗೆ ರಸ್ತೆಯಲ್ಲಿ ನಿರ್ಮಿಸಿರುವ ಮಂತ್ರಿ ಸ್ಕ್ವೇರ್ ಜಾಗದಲ್ಲಿ 4.28 ಎಕರೆ ಭೂಮಿ ಸರ್ಕಾರಕ್ಕೆ ಸೇರಿದೆ. ಅದನ್ನು ತೆರವುಗೊಳಿಸಲು ಆದೇಶಿಸುವಂತೆ ಕೋರಿ ಬಿಬಿಎಂಪಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಮತ್ತು ಸಕ್ಷಮ ಪ್ರಾಧಿಕಾರದ ವತಿಯಿಂದ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, 2019 ಡಿ. 24ರಂದು ತೀರ್ಪು ಪ್ರಕಟಿಸಿ, ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 67ರ ಪ್ರಕಾರ ರಸ್ತೆ, ಕೆರೆ ಮತ್ತಿತರ ಸ್ವತ್ತುಗಳು ಸರ್ಕಾರಕ್ಕೆ ಸೇರಿದ್ದಾಗಿರುತ್ತವೆ. ಅದರಂತೆ ಮಂತ್ರಿಮಾಲ್ ಮತ್ತು ಮಂತ್ರಿ ಗ್ರೀನ್ ಇರುವ ಜಕ್ಕರಾಯನ ಕೆರೆಯ ಸರ್ವೆ ನಂಬರ್ 56ರಲ್ಲಿನ 37 ಗುಂಟೆ ಹಾಗೂ ಹನುಮಂತಪುರ ಗ್ರಾಮ ರಸ್ತೆಯ 3.31 ಎಕರೆ ಪ್ರದೇಶವು ಬಿಬಿಎಂಪಿಗೆ ಸೇರಿದ ಸ್ವತ್ತು. ಹೀಗಾಗಿ ಈ ಒತ್ತುವರಿ ಸ್ವತ್ತುಗಳನ್ನು ನಿಯಮಾನುಸಾರ ತೆರವು ಮಾಡಿ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಆದೇಶಿಸಿತ್ತು.