ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ತುಘಲಕ್ ದರ್ಬಾರ್ ನಡೆಸಲು ಹೊರಟಿದೆ ಎಂದು ಶಿಕ್ಷಕರ ಮತ್ತು ಆಡಳಿತ ಮಂಡಳಿಗಳ ಫೋರಂ ಅಧ್ಯಕ್ಷ ಎ.ಪಿ.ರಂಗನಾಥ್ ಕಿಡಿಕಾರಿದ್ದಾರೆ.
'ಶಿಕ್ಷಣ ಸಚಿವರೇ ಇತಿಹಾಸದಲ್ಲಿ ತುಘಲಕ್ ದರ್ಬಾರ್ ಬಗ್ಗೆ ಕೇಳಿದ್ದೆವು. ಈಗ ನಿಮ್ಮ ಸರ್ಕಾರದ ಕೃಪೆಯಿಂದ ಅದನ್ನು ನೋಡುತ್ತಿದ್ದೇವೆ. ಬೆಂಗಳೂರು ಕೋವಿಡ್ ನಿಯಂತ್ರಣದ ಉಸ್ತುವಾರಿ ಹೊತ್ತಿರುವ ಸಚಿವ ಆರ್.ಅಶೋಕ್ ಎಲ್ಲರಿಗೂ ನಿಮ್ಮ ಊರು ಸೇರಿಕೊಳ್ಳಿ ಎಂದು ಹೇಳಿಕೆ ನೀಡಿದರು. ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 22ರವರೆಗೆ ಎಸ್ಎಸ್ಎಲ್ಸಿ ಮೌಲ್ಯಮಾಪನ ಇರುವುದಿಲ್ಲ ಎಂದು ಕೂಡಾ ಸರ್ಕಾರ ಹೇಳಿತ್ತು. ಆದರೆ ತಾವು ತುಘಲಕ್‌ನಂತೆ ಅವತಾರ ತಾಳಿ ಶಿಕ್ಷಕರಿಗೆ ಮೌಲ್ಯಮಾಪನ ಕರ್ತವ್ಯಕ್ಕೆ ಇಂದೇ ಹಾಜರಾಗಲು ಆದೇಶ ಹೊರಡಿಸಿದ್ದೀರಿ. ಈಗಾಗಲೇ ನಿಮ್ಮ ಸಂಪುಟ ಸಹೋದ್ಯೋಗಿ ಅಶೋಕ್ ಮಾತು ಕೇಳಿ ಊರು ಸೇರಿಕೊಂಡ ಶಿಕ್ಷಕರು ಲಾಕ್ಡೌನ್ನಿಂದ ಹೇಗೆ ವಾಪಸ್ ಮೌಲ್ಯಮಾಪನ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯ?' ಎಂದು ಮಾಧ್ಯಮ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.
ಮಹಿಳಾ ಶಿಕ್ಷಕಿಯರು ಸಾರ್ವಜನಿಕ ಸಾರಿಗೆ ಮೇಲೆ ಅವಲಂಬಿತವಾಗಿರುತ್ತಾರೆ. ಅವರಿಗೆ ನಿಮ್ಮ ಮುಂದಾಲೋಚನೆ ಇಲ್ಲದೆ ತೆಗೆದುಕೊಂಡ ತೀರ್ಮಾನದಿಂದ ತೀವ್ರ ತೊಂದರೆಯಾಗಿದೆ. ಸಚಿವ ಸಂಪುಟದ ಸಹೋದ್ಯೋಗಿಗಳ ಸಮನ್ವಯದ ಕೊರೆತೆ ಆಡಳಿತದಿಂದ ಶಿಕ್ಷಕರು ತೊಂದರೆಗೀಡಾಗುತ್ತಿದ್ದಾರೆ. ಕೂಡಲೇ ಮೌಲ್ಯಮಾಪನ ಕರ್ತವ್ಯಕ್ಕೆ ಹಾಜರಾಗಲು ಹೊರಡಿಸಿರುವ ಆದೇಶ ಹಿಂಪಡೆದು ಶಿಕ್ಷಕರನ್ನು ಸಂಕಷ್ಟದಿಂದ ಪಾರು ಮಾಡಿ ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.