ಬೆಂಗಳೂರು: ಮರಣಪೂರ್ವ ಯಾವುದೇ ವ್ಯಕ್ತಿ ನೀಡುವ ಹೇಳಿಕೆಗಳು ವಿಶ್ವಾಸಾರ್ಹತೆ ಮತ್ತು ಸಂಶಯಾತೀತವಾಗಿರಬೇಕು ಎಂದು ಹೈಕೋರ್ಟ್ ತಿಳಿಸಿದೆ. ಗೃಹಿಣಿಯೊಬ್ಬರ ಕೊಲೆ ಪ್ರಕರಣದಲ್ಲಿ ತಮ್ಮನ್ನು ದೋಷಿಗಳೆಂದು ತೀರ್ಮಾನಿಸಿ, ಜೀವಾವಧಿ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ನಿವಾಸಿಗಳಾದ ತಿಪ್ಪೇಸ್ವಾಮಿ ಹಾಗೂ ಅವರ ತಂದೆ-ತಾಯಿ ಕ್ರಿಮಿನಲ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್ ಅವರ ನೇತೃತ್ವದ ವಿಭಾಗೀಯ ಪೀಠ ಆದೇಶ ಮಾಡಿದೆ.
ಮರಣಪೂರ್ವ ಹೇಳಿಕೆ ದಾಖಲಿಸುವವರು ಮಾನಸಿಕವಾಗಿ ಸದೃಢರಾಗಿದ್ದಾರೆ ಎಂಬುದನ್ನು ಪ್ರಮಾಣೀಕರಿಸಿ ವೈದ್ಯರು ಪ್ರಮಾಣ ಪತ್ರ ನೀಡುವುದು ಕಡ್ಡಾಯ. ಪ್ರಕರಣದಲ್ಲಿ ಕೊಲೆಗೀಡಾದ ಮಂಜಮ್ಮ ಅವರು ನೀಡಿದ್ದ ಮರಣಪೂರ್ವ ಹೇಳಿಕೆ ವಿಶ್ವಾಸಾರ್ಹತೆ ಮತ್ತು ನೈಜತೆಯಿಂದ ಕೂಡಿಲ್ಲ. ಅದು ಸಂಶಯಾಸ್ಪದವಾಗಿದೆ ಎಂದು ತೀರ್ಮಾನಿಸಿದ ನ್ಯಾಯಪೀಠ, ಮೇಲ್ಮನವಿದಾರರನ್ನು ಕೊಲೆ ಆರೋಪದಿಂದ ಖುಲಾಸೆಗೊಳಿಸಿದೆ.
ಪ್ರಕರಣದ ಹಿನ್ನೆಲೆ: ಮಂಜಮ್ಮ ಮತ್ತು ತಿಪ್ಪೇಸ್ವಾಮಿ 2010ರ ಜೂ.5ರಂದು ಮದುವೆಯಾಗಿದ್ದರು. ಮದುವೆ ವೇಳೆ ತಿಪ್ಪೇಸ್ವಾಮಿ 12 ಸಾವಿರ ರೂ. ವರದಕ್ಷಿಣೆ ಪಡೆದಿದ್ದರು. ಮದುವೆಯ ನಂತರ ಪತಿಯ ಮನೆಯಲ್ಲಿ ಮಂಜಮ್ಮ ವಾಸವಾಗಿದ್ದರು. ತಿಪ್ಪೇಸ್ವಾಮಿ, ಆತನ ತಂದೆ ನಾಗೇಂದ್ರಪ್ಪ ಹಾಗೂ ತಾಯಿ ಜಯಮ್ಮ ಹೆಚ್ಚುವರಿಯಾಗಿ 25 ಸಾವಿರ ರೂ. ವರದಕ್ಷಿಣೆ ತರುವಂತೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿತ್ತು.
2012ರ ಅ.14ರಂದು ಮಂಜಮ್ಮ ಜೊತೆ ಜಗಳ ತೆಗೆದ ಆರೋಪಿಗಳು ಆಕೆಯನ್ನು ಒಂದು ಕೋಣೆಗೆ ಎಳೆದುಕೊಂಡು ಹೋಗಿ ಹಲ್ಲೆ ನಡೆಸಿದ್ದರು. ಕೂಡಿ ಹಾಕಿ ಕೊಲೆ ಮಾಡಲು ಪಿತೂರಿ ನಡೆಸಿದ್ದರು. ತಿಪ್ಪೇಸ್ವಾಮಿ ಮಂಜಮ್ಮ ಮೈಮೇಲೆ ಸೀಮೆ ಎಣ್ಣೆ ಸುರಿದರೆ, ಆತನ ತಂದೆ ನಾಗೇಂದ್ರಪ್ಪ ಬೆಂಕಿ ಹಚ್ಚಿದ್ದರು. ಈ ಇಬ್ಬರಿಗೆ ಅಪರಾಧ ಎಸಗಲು ಜಯಮ್ಮ ಅವರು ಪ್ರಚೋದನೆ ನೀಡಿದ್ದರು. ಬೆಂಕಿಯಿಂದ ಮೈ ಸುಟ್ಟು ಮಂಜಮ್ಮ ಜೋರಾಗಿ ಕಿರುಚಿಕೊಂಡಿದ್ದರು. ಆಕೆಯ ನೆರವಿಗೆ ಧಾವಿಸಿದ್ದ ನೆರೆಹೊರೆಯವರು, ಬೆಂಕಿ ನಂದಿಸಿ ಆಸ್ಪತ್ರೆಗೆ ಸೇರಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಜಮ್ಮ ಮೃತಪಟ್ಟಿದ್ದರು ಎಂದು ಆರೋಪಿಗಳ ವಿರುದ್ಧ ಚಿತ್ರದುರ್ಗದ ಹಿರಿಯೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯವು ಆರೋಪಿಗಳ ವಿರುದ್ಧ ಪತ್ನಿ ಮೇಲೆ ಪತಿ ಮತ್ತವರ ಕುಟುಂಬ ಸದಸ್ಯರ ಕಿರಕುಳ (ಐಪಿಸಿ ಸೆಕ್ಷನ್ 498-ಎ), ವರದಕ್ಷಿಣೆ ಸಾವು (ಸೆಕ್ಷನ್ 304-ಬಿ), ವರದಕ್ಷಿಣೆ ತಡೆ ಕಾಯ್ದೆಯ ಸೆಕ್ಷನ್ 3 ಮತ್ತು 4 ಅಡಿ ವರದಕ್ಷಿಣೆಗೆ ಬೇಡಿಕೆಯಿಟ್ಟ ಮತ್ತು ವರದಕ್ಷಿಣೆ ಸ್ವೀಕರಿಸಿದ ಪ್ರಕರಣದಿಂದ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಆದರೆ, ಕೊಲೆ ಪ್ರಕರಣದಲ್ಲಿ ದೋಷಿಯಾಗಿ ಪರಿಗಣಿಸಿ ಜೀವಾವಧಿ ಶಿಕ್ಷೆ ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಿತ್ತು. ಈ ಆದೇಶ ರದ್ದು ಕೋರಿ ಮೂವರು ಆರೋಪಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಆರೋಪಿಗಳ ಪರ ವಕೀಲ ಡಿ.ಮೋಹನ್ ಕುಮಾರ್ ವಾದ ಮಂಡಿಸಿದ್ದರು.
ಮಂಜಮ್ಮರಿಂದ ಎರಡು ಬಾರಿ ಮರಣಪೂರ್ವ ಹೇಳಿಕೆ ಪಡೆಯಲಾಗಿದೆ. ಮೊದಲ ಬಾರಿಗೆ ತಾಲೂಕು ಕಾರ್ಯಕಾರಿ ಮ್ಯಾಜಿಸ್ಟ್ರೇಟ್ (ತಹಶೀಲ್ದಾರ್) ಕಾಂತರಾಜು, ಎರಡನೇ ಬಾರಿ ಮುಖ್ಯ ಕಾನ್ಸ್‌ಟೇಬಲ್ ಸಿ.ಬಿ. ಮುರುಗೋಡ್ ಅವರು ಮಂಜಮ್ಮಳ ಮರಣ ಪೂರ್ವ ಹೇಳಿಕೆ ದಾಖಲಿಸಿಕೊಂಡಿದ್ದರು. ಮಂಜಮ್ಮಗೆ ಚಿಕಿತ್ಸೆ ನೀಡಿದ್ದ ವೈದ್ಯೆ ರೂಪಾ, ಮಂಜಮ್ಮ ಶೇ.75ರಿಂದ 80ರಷ್ಟು ಸುಟ್ಟು ಗಾಯಗಳೊಂದಿಗೆ ದಾಖಲಾಗಿದ್ದರು. ಅಲ್ಲದೇ, ಹೇಳಿಕೆ ನೀಡಲು ಮಾನಸಿಕ ಸದೃಢವಾಗಿದ್ದರು ಎಂದು ಹೇಳಿಕೆ ನೀಡಿದ್ದರು. ಆದರೆ, ಮರಣಪೂರ್ವ ಹೇಳಿಕೆ ನೀಡುವಾಗ ಮಂಜಮ್ಮ ಮಾನಸಿಕವಾಗಿ ಸದೃಢವಾಗಿದ್ದರು ಎಂಬುದನ್ನು ದೃಢೀಕರಿಸಿ ಪ್ರಮಾಣ ಪತ್ರ ನೀಡಿಲ್ಲ. ಈ ಅಂಶವನ್ನು ವೈದ್ಯರೂ ಸಹ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದರು. ವೈದ್ಯರು ದೃಢೀಕರಣ ಪತ್ರ ನೀಡುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಂಜಮ್ಮ ಅವರು ಮರಣಪೂರ್ವ ಹೇಳಿಕೆ ದಾಖಲಿಸಲು ಮಾನಸಿಕವಾಗಿ ಸದೃಢವಾಗಿದ್ದಳು ಎಂಬುದನ್ನು ಸಾಬೀತುಪಡಿಸಲು ಯಾವುದೇ ದಾಖಲೆಯಿಲ್ಲ ಎಂದು ವಾದಿಸಿದ್ದರು.
ಮಂಜಮ್ಮ ಅವರ ಪೋಷಕರು ಹೇಳಿಕೆ ನೀಡಿ, ತಮ್ಮ ಪುತ್ರಿ ತೀವ್ರ ಹೊಟ್ಟೆ ನೋವಿಂದ ನರಳುತ್ತಿದ್ದಳು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ. ಸುಟ್ಟಗಾಯಗಳೊಂದಿಗೆ ಮಂಜಮ್ಮ ಅವರನ್ನು ನೆರೆಹೊರೆಯವರು ಆಸ್ಪತ್ರೆಗೆ ದಾಖಲಿಸಿದ್ದ ಎಂದು ಹೇಳಲಾಗಿದೆ. ಈ ಅಂಶವನ್ನು ಮರಣಪೂರ್ವ ಹೇಳಿಕೆ ದಾಖಲಿಸಿಕೊಂಡಿದ್ದ ತಹಸೀಲ್ದಾರ್, ಮುಖ್ಯಕಾನ್ಸ್‌ಟೇಬಲ್ ರೂಪಾ ಅವರು ಬಿಟ್ಟರೆ ಮತ್ಯಾವುದೇ ಸಾಕ್ಷ್ಯಿಯೂ ಪ್ರಾಸಿಕ್ಯೂಷನ್ ವಾದವನ್ನು ಬೆಂಬಲಿಸಿ ಸಾಕ್ಷ್ಯ ನುಡಿದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹಿರಿಯ ನಾಗರಿಕರು ಪರಿಹಾರ ಕೋರಿ ವಕೀಲರ ಮೂಲಕ ಎಸಿ, ಡಿಸಿಗಳ ಮುಂದೆ ಮೇಲ್ಮನವಿ ಸಲ್ಲಿಸಬಹುದು: ಹೈಕೋರ್ಟ್