ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಸಚಿವ ಡಿಕೆಶಿ ಬೆಂಗಳೂರಿನಲ್ಲಿ ಐವರು ಶಾಸಕರನ್ನು ರಾಜೀನಾಮೆ ಹಿಂತೆಗೆದುಕೊಳ್ಳಲು ಮನವೊಲಿಸುತ್ತಿರುವಾಗಲೇ ಸ್ಪೀಕರ್ ವಿರುದ್ಧ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿ ರಾಜೀನಾಮೆ ಅಂಗೀಕರಿಸಲು ಆದೇಶಿಸುವಂತೆ ಕೋರಿದ್ದಾರೆ.
ಶಾಸಕರಾದ ಡಾ. ಸುಧಾಕರ್, ಸಚಿವ ಎಂಟಿಬಿ ನಾಗರಾಜ್, ರೋಷನ್ ಬೇಗ್, ಮುನಿರತ್ನ, ಆನಂದ್ ಸಿಂಗ್ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿ ಸ್ಪೀಕರ್ ಅವರು ತಮಗೆ ರಾಜೀನಾಮೆ ಅಂಗೀಕರಿಸಲು ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ರಾಜೀನಾಮೆ ಹಿಂದಕ್ಕೆ ಪಡೆಯಲು ಒತ್ತಡ ಹಾಕುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ. ಸುಪ್ರೀಂಕೋರ್ಟ್ ಮಂಗಳವಾರ ನಡೆಸುವ ಕರ್ನಾಟಕದ ಇತರ ಹತ್ತು ಶಾಸಕರ ಅರ್ಜಿ ಜತೆಗೆ ತಮ್ಮ ಅರ್ಜಿಯನ್ನೂ ವಿಚಾರಣೆಗೆ ಅಂಗೀಕಾರ ಮಾಡಬೇಕೆಂದು ಈ ಶಾಸಕರು ನ್ಯಾಯಾಲಯವನ್ನು ಕೋರಿದ್ದಾರೆ.
ಒಂದೆಡೆ ಐವರು ಶಾಸಕರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿ ಸ್ಪೀಕರ್ ವಿರುದ್ದ ದೂರಿದರೆ, ಮತ್ತೊಂದೆಡೆ ಈ ಶಾಸಕರುಗಳ ಮನವೊಲಿಸುವ ಕಾರ್ಯ ಸತತವಾಗಿ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಸಚಿವ ಡಿಕೆ ಶಿವಕುಮಾರ್ ಎಂಟಿಬಿ ನಾಗರಾಜ್ ರನ್ನು ರಾಜೀನಾಮೆ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯನವರ ಮನೆಗೂ ಕರೆ ತಂದು ಒತ್ತಡ ಹೇರುವ ಯತ್ನ ನಡೆಸಿದ್ದಾರೆ. ಹಾಗೆಯೇ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಅವರ ಮನವೊಲಿಕೆ ಯತ್ನವೂ ನಡೆದಿದೆ. ಈ ಬೆಳವಣಿಗೆಗಳ ನಡುವೆಯೇ ಅತೃಪ್ತ ಶಾಸಕರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿ ಸ್ಪೀಕರ್ ತಮ್ಮ ರಾಜೀನಾಮೆ ಅಂಗೀಕರಿಸಲು ಆದೇಶ ನೀಡುವಂತೆ ಕೋರಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.