ಬೆಂಗಳೂರು: ಬೆಂಗಳೂರಿನ ಡಿ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾನೆ. ಈ ಮೂಲಕ ಗಲಭೆಯಿಂದ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದೆ.
ಡಿ.ಜಿ. ಹಳ್ಳಿ ನಿವಾಸಿಯಾಗಿದ್ದ ನದೀಂ ಮೃತಪಟ್ಟ ಆರೋಪಿ ಎಂದು ತಿಳಿದು ಬಂದಿದೆ. ಕಳೆದ ಮಂಗಳವಾರ ನಡೆದ ಗಲಭೆಯಲ್ಲಿ ನದೀಂ ಭಾಗಿಯಾಗಿ ಕಲ್ಲು ತೂರಾಟ ನಡೆಸಿದ್ದ ಎನ್ನುವುದು ಮೇಲ್ನೊಟಕ್ಕೆ ಗೊತ್ತಾಗಿತ್ತು. ಕಾನೂನು ಕೈಗೆತ್ತಿಕೊಂಡ ಪುಂಡರ ಮೇಲೆ ಪೊಲೀಸರು ಗಲಭೆ ಹತ್ತಿಕ್ಕಲು ಗೋಲಿಬಾರ್ ನಡೆಸಿದ್ದರು. ಈ ವೇಳೆ ಮೂವರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದರು.
ಇದೀಗ ಮತ್ತೊಬ್ಬ ಆರೋಪಿ ಸಾವನ್ನಪ್ಪಿದ್ದಾನೆ. ಗಲಾಟೆ ವೇಳೆ ಈತನ ಹೃದಯ ಭಾಗಕ್ಕೆ ಪೆಟ್ಟು ಬಿದ್ದಿತ್ತು. ಬಂಧನದ ಬಳಿಕ ಉಸಿರಾಟ ತೊಂದರೆ ಕಂಡುಬಂದಿದ್ದರಿಂದ ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇನ್ನು ಈತನನ್ನು ಸ್ವ್ಯಾಬ್ ಟೆಸ್ಟ್ಗೆ ಒಳಪಡಿಸಿದಾಗ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ತೀವ್ರ ನೋವಿನಿಂದ ಬಳಲುತ್ತಿದ್ದ ಆರೋಪಿ ನದೀಂ ಇಂದು ಆಸ್ಪತ್ರೆಯಲ್ಲಿಯೇ ಅಸುನೀಗಿದ್ದಾನೆ ಎಂದು ತಿಳಿದುಬಂದಿದೆ. ಗಲಭೆಯಲ್ಲಿ ಈವರೆಗೆ ಒಟ್ಟು ನಾಲ್ಕು ಮಂದಿ ಮೃತಪಟ್ಟಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿ ಆಗಿದೆ.