ಬೆಂಗಳೂರು: ನಟಿ ಸಂಜನಾ ಬಗ್ಗೆ ಮಾಹಿತಿ ಕಲೆ ಹಾಕಲು ಸಿಸಿಬಿ ಹಾಗೂ ಇಡಿ ತನಿಖೆಗೆ ಮುಂದಾಗಿದ್ದು, ಸದ್ಯ ಆಕೆಯ ಆದಾಯದ ಒಂದೊಂದೇ ಮೂಲಗಳನ್ನ ಪತ್ತೆಹಚ್ಚುತ್ತಿದ್ದಾರೆ. ಇಡಿ ತನಿಖೆ ವೇಳೆ ಚೀನಾ ಮೂಲದ ಬಿಂಗೋ ಹಾಗೂ ಹಕೂನ ಆ್ಯಪ್ಗಳನ್ನು ಮೂಲಕ ಹಣ ಗಳಿಸುತ್ತಿದ್ದಳು ಎಂಬ ವಿಚಾರ ಬಯಲಾಗಿದೆ.
ಬಿಂಗೋ ಆನ್ಲೈನ್ನಲ್ಲಿ ಹಣ ಇನ್ವೆಸ್ಟ್ ಮಾಡಿ ಆಡುವ ಆಟವಾಗಿದೆ. ಇದು ಕ್ಯಾಸಿನೋ ರೀತಿಯೇ ಇದ್ದು, ಆನ್ಲೈನ್ ಮೂಲಕ ಆಟ ಆಡಬಹುದು. ಹಾಗೆಯೇ ಹಕೂನ ಪ್ರೈವೇಟ್ ಚಾಟ್ ಅಪ್ಲಿಕೇಶನ್, ಮೆಸೇಜ್ ಮತ್ತು ಕಾಲ್ ಮಾಡುವ ಆ್ಯಪ್ ಆಗಿದೆ. ಇದರಲ್ಲಿ ಮಾತುಕತೆ ನಡೆಸಿದರೂ ಅದು ಗೌಪ್ಯವಾಗಿರುತ್ತದೆ. ಈ ಆ್ಯಪ್ನಿಂದ ಮೆಸೇಜ್, ವಾಟ್ಸ್ಆ್ಯಪ್ ಕಾಲ್ ಮಾಡಿದ್ರೆ ರಿಟ್ರೈವ್ ಆಗೋದು ಕಷ್ಟ. ಸದ್ಯ ತನಿಖೆ ವೇಳೆ ಈ ಎರಡು ಆ್ಯಪ್ಗಳಿಂದ ಹಣವನ್ನು ಟ್ರಾನ್ಸ್ಫರ್ ಮಾಡುತ್ತಿದ್ದಳು ಎನ್ನಲಾಗ್ತಿದೆ.
ಕೇವಲ ಐಷಾರಾಮಿ ಪಾರ್ಟಿ ಆಯೋಜನೆ, ಡ್ರಗ್ಸ್ ಪೆಡ್ಲಿಂಗ್ ಮಾತ್ರವಲ್ಲದೇ ಸಂಜನಾಳಿಗೆ ಇದು ಮತ್ತೊಂದು ಆದಾಯದ ಮೂಲವಾಗಿದೆ. ಸದ್ಯ ಸಂಜನಾಳ ಆದಾಯದ ಮೂಲಗಳನ್ನ ಇಡಿ ಕಲೆ ಹಾಕಲು ಮುಂದಾಗಿದ್ದು, ಆಕೆಯ ಒಂದೊಂದು ವಿಚಾರವನ್ನ ಪತ್ತೆ ಹಚ್ಚುತ್ತಿದ್ದಾರೆ. ಅಷ್ಟೇ ಅಲ್ಲದೆ, ಆಕೆಯ ಆಪ್ತರಿಂದ ಕೂಡ ಸಂಜನಾ ವ್ಯವಹಾರದ ಬಗ್ಗೆ ಮಾಹಿತಿ ತಿಳಿಯಲು ಮುಂದಾಗಿದ್ದಾರೆ.