ಬೆಂಗಳೂರು: ವಾಲ್ಮೀಕಿ ಸಮುದಾಯಕ್ಕೆ ಇರುವ ಮೀಸಲಾತಿ ಪ್ರಮಾಣ ಪರಿಷ್ಕರಣೆ ಮಾಡುವ ಕುರಿತು ವರದಿ ನೀಡಲು ಹೊಸ ಸಮಿತಿ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಲ್ಮೀಕಿ ಸಮುದಾಯದ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀಗಳ ನೇತೃತ್ವದಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಸಚಿವ ಬಿ.ಶ್ರೀರಾಮುಲು, ರಾಜುಗೌಡ ಸೇರಿದ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿತು. ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿ ವಾಲ್ಮೀಕಿ ಸಮಾಜದ ಮೀಸಲಾತಿ ಬಗ್ಗೆ ಚರ್ಚೆ ನಡೆಸಲಾಯಿತು.
ನಿವೃತ್ತ ಐಎಎಸ್ ಅಧಿಕಾರಿ ಮೃತ್ಯುಂಜಯ, ರಾಜ್ಯದಲ್ಲಿ ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಅಗತ್ಯತೆ ಇರುವ ಬಗ್ಗೆ ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಟ್ಟರು. ಇಂದು ವಾಲ್ಮೀಕಿ ಜನಸಂಖ್ಯೆ ರಾಜ್ಯ ಜನಸಂಖ್ಯೆಯ 7 ರಷ್ಟಿದೆ. ಈ ಹಿಂದೆ ಕೊಟ್ಟ ಶೇ. 3 ರಷ್ಟರ ಮೀಸಲಾತಿ ಇಂದಿನ ಜನಸಂಖ್ಯೆಗೆ ಸಾಕಾಗುತ್ತಿಲ್ಲ. ಈ ಹಿಂದಿನ ಹಲವು ಸರ್ಕಾರಗಳಿಗೆ ನಾವು ಮನವರಿಕೆ ಮಾಡಿಕೊಟ್ಟರೂ ಯಾರು ನಮ್ನ ಮನವಿಗೆ ಸ್ಪಂದಿಸಲಿಲ್ಲ. ಈ ಹಿಂದೆ ನೀವೆ ವಾಲ್ಮೀಕಿ ಜಯಂತಿಗೆ ರಜೆ ಘೋಷಣೆ ಮಾಡಿದ್ರಿ. ನಮ್ನ ವಾಲ್ಮೀಕಿ ಸಮಾಜದ ಸ್ವಾಮಿಜಿಯವರು ಕಾಲ್ನಡಿಗೆಯಲ್ಲಿ ರಾಜನಹಳ್ಳಿಯಿಂದ ಬೆಂಗಳೂರಿನವರೆಗೆ ಜಾತಾ ಮಾಡಿ ಹಿಂದಿನ ಸರ್ಕಾರಕ್ಕೆ ಮನವಿ ಮಾಡಿದರೂ ಅವರು ಕೇಳಲಿಲ್ಲ. ಹಾಗಾಗಿ ನಮ್ಮ 5 ದಶಕಗಳ ಬೇಡಿಕೆಯಾದ ಶೇಕಡಾ 7.5ರಷ್ಟು ಮೀಸಲಾತಿಯನ್ನು ಕೊಡಬೇಕು ಎಂದು ಮನವಿ ಮಾಡಿದರು.
ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ಸಚಿವ ಶ್ರೀರಾಮಲು: ಬಿಎಸ್ವೈ ನಮ್ಮ ಸಮಾಜಕ್ಕೆ ಯಾವಗಲೂ ಒಳ್ಳೆಯದು ಮಾಡಿಕೊಂಡು ಬಂದಿದ್ದೀರಿ. ಹಾಗಾಗಿ ಈಗಲು ನಮ್ಮ ಮನವಿಯನ್ನು ನೀವು ಪರಿಗಣಿಸಲೇಬೇಕು ಎಂದು ಒತ್ತಾಯ ಮಾಡಿದರು. ಈಗಾಗಲೇ ನಾವು ಮನವಿ ಮಾಡಿರೋ ಬೇಡಿಕೆಯನ್ನು ಈಡೇರಿಸುವತ್ತ ತ್ವರಿತ ನಿರ್ಣಯ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಎಲ್ಲಾ ಮುಖಂಡರ ಒತ್ತಾಯಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿಮ್ಮೆಲ್ಲರ ಬೇಡಿಕೆ ನ್ಯಾಯಯುತವಾಗಿದೆ. ಈಗ ಇನ್ನೊಂದು ಸಮಿತಿಯನ್ನು ಮಾಡೋಣ ಆದಷ್ಟು ಬೇಗ ವರದಿ ನೀಡುವಂತೆ ಸೂಚನೆ ನೀಡುತ್ತೇನೆ. ನ್ಯಾ.ನಾಗಮೋಹನ್ ದಾಸ್ ವರದಿ ಮತ್ತು ಹೊಸ ವರದಿಯನ್ನು ನೋಡಿಕೊಂಡು ಒಂದು ತೀರ್ಮಾನಕ್ಕೆ ಬರೋಣ ಎಂದು ಭರವಸೆ ನೀಡಿದರು. ನಿಮ್ಮ ಬೇಡಿಕೆಗಳನ್ನು ಈಡೇರಿಸುವ ಜವಬ್ದಾರಿ ನನ್ನದು. ಇದನ್ನು ಕೂಡಲೇ ಸಚಿವ ಸಂಪುಟದಲ್ಲಿಟ್ಟು ಸಹೋದ್ಯೋಗಿಗಳ ಜೊತೆ ಚರ್ಚೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ರಾಜೂಗೌಡ ನಮ್ಮ ಶ್ರೀಗಳು ಮೀಸಲಾತಿ ಹೆಚ್ಚಳದ ಜೊತೆಯಲ್ಲಿ ಸಮುದಾಯಕ್ಕೆ ಡಿಸಿಎಂ ಹಾಗು ಮೂರು ಮಂತ್ರಿ ಸ್ಥಾನದ ಬೇಡಿಕೆ ಇಟ್ಟಿದ್ದಾರೆ. ಆದರೆ ನಮಗೆ ಯಾವ ಬೇಡಿಕೆಯೂ ಬೇಡ, ಡಿಸಿಎಂ, ಮಂತ್ರಿ ಸ್ಥಾನ ಬೇಡ. ಶೇ.7.5 ರ ಮೀಸಲಾತಿ ಬಂದರೆ ಸಾಕು, ಅದೊಂದೇ ನಮ್ಮ ಗುರಿ, ಅದನ್ನು ಈಡೇರಿಸಿದರೆ ನಮ್ಮ ಸಮುದಾಯದವರನ್ನ ಮುಖ್ಯಮಂತ್ರಿ ಮಾಡಿದಷ್ಟೇ ಸಂತೋಷವಾಗುತ್ತದೆ ಎಂದರು