ಬೆಂಗಳೂರು : ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತ ಆರೋಪಿ ಖುಮರುಲ್ಲಾ ಜಮಾಲ್ನೊಂದಿಗೆ ಎಸ್ಐಟಿ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದಾರೆ.
ಐಎಂಎ ಕಂಪನಿ ಮಾಲೀಕ ಮಹಮ್ಮದ್ ಮನ್ಸೂರ್ ಖಾನ್ಗೆ ಸಹಾಯ ಮಾಡಿದ ಆರೋಪದ ಮೇಲೆ ಫ್ರೇಜರ್ ಟೌನ್ ನಿವಾಸಿ ಖಮರುಲ್ಲಾ ಜಮಾಲ್ ನನ್ನ ನಿನ್ನೆ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದರು. ಸದ್ಯ ಎಸ್ಐಟಿ ವಶದಲ್ಲಿರುವ ಆರೋಪಿ ಹಲವಾರು ರೋಚಕ ವಿಚಾರಗಳನ್ನ ಬಾಯಿಬಿಟ್ಟಿದ್ದಾನೆ.
ಆರೋಪಿ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಜಮೀನಿನಲ್ಲಿ ಹಣ ಬಚ್ಚಿಡಲು ಬಂಕರ್ ರೆಡಿ ಮಾಡಿದ್ದ. ಬಂಕರ್ ಇರುವ ಸ್ಥಳಕ್ಕೆ ಆರೋಪಿ ಖಮರುಲ್ಲ ಜಮಾಲ್ ನನ್ನು ಕರೆದೊಯ್ದು ಮಹಜರು ಮಾಡಿದ್ದಾರೆ. ಅಲ್ಲದೇ ಕೆಲ ದಾಖಲೆ ಮತ್ತು ಹಣ ವಶ ಪಡಿಸಿಕೊಂಡಿದ್ದಾರೆ.
ಐಎಂಎ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮನ್ಸೂರ್ ಖಾನ್ ಕಮರ್ಷಿಯಲ್ ಸ್ಟ್ರೀಟ್ನಲ್ಲಿದ್ದ ಆಭರಣದ ಅಂಗಡಿಯಲ್ಲಿದ್ದ ಎಲ್ಲ ಹಣವನ್ನು ಖುಮರುಲ್ಲ ಜಮಾಲ್ಗೆ ನೀಡಿದ್ದಾನೆ. ಈ ಹಣವನ್ನು ಖುಮರುಲ್ಲಾ ಜಮಾಲ್ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಜಮೀನಿನಲ್ಲಿರುವ ಇಟ್ಟಿಗೆ ಭಟ್ಟಿಯಲ್ಲಿ ಬಂಕರ್ ನಲ್ಲಿಟ್ಟಿರುವ ವಿಚಾರ ಬಾಯಿ ಬಿಟ್ಟಿದ್ದಾನೆ. ಇದೇ ರೀತಿ ಮನ್ಸೂರ್ ಹಲವಾರು ಮಂದಿಗೆ ಚಿನ್ನಾಭರಣ ನಗದು ನೀಡಿದ್ದು ಎಸ್ಐಟಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮತ್ತೊಂದೆಡೆ ಪ್ರಕರಣವನ್ನ ರಾಜ್ಯ ಸರ್ಕಾರ ಸಿಬಿಐಗೆ ನೀಡಿದೆ. ಎಸ್ಐಟಿ ಇಲ್ಲಿಯವರೆಗೆ ನಡೆದ ತನಿಖೆಯ ದಾಖಲೆಗಳನ್ನ ಸಿಬಿಐಗೆ ನೀಡಲಿದ್ದಾರೆ. ಸದ್ಯದಲ್ಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮನ್ಸೂರ್ ಖಾನ್ನನ್ನ ಸಿಬಿಐ ವಿಚಾರಣೆ ನಡೆಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.