ಬೆಂಗಳೂರು: ದಲಿತ ಎಡಗೈ ಸಮುದಾಯಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡುವಂತೆ ಪಕ್ಷದ ಮೇಲೆ ಒತ್ತಡ ಹೇರುವ ಪ್ರಯತ್ನ ಮುಂದುವರಿಸಿರುವ ಮಾಜಿ ಸಚಿವ ಹೆಚ್. ಆಂಜನೇಯ, ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
ಓದಿ: ಬಸ್ ಕಾಲುವೆಗೆ ಬಿದ್ದು ಪ್ರಯಾಣಿಕರ ಸಾವು ಪ್ರಕರಣ: ಒಂದೇ ಚಿತೆಯಲ್ಲಿ ಸತಿ-ಪತಿ ಅಂತ್ಯಕ್ರಿಯೆ!
ಕುಮಾರ ಕೃಪಾ ಅತಿಥಿ ಗೃಹಕ್ಕೆ ಆಗಮಿಸಿದ ಅವರು ಸುರ್ಜೆವಾಲಾರನ್ನ ಭೇಟಿಯಾದರು. 'ಎಡಗೈ ಸಮುದಾಯಕ್ಕೆ ಕಾರ್ಯಾಧ್ಯಕ್ಷ ಸ್ಥಾನ ನೀಡಿ. ರಾಜ್ಯದಲ್ಲಿ 60 ಲಕ್ಷ ಸಮುದಾಯದ ಜನರಿದ್ದೇವೆ. ಎಲ್ಲಾ ಸಮುದಾಯಗಳಿಗೂ ಅವಕಾಶ ಕೊಟ್ಟಿದ್ದೀರ, ನಮ್ಮಸಮುದಾಯಕ್ಕೊಂದು ಅವಕಾಶ ಕೊಡಿ. ನಮ್ಮ ಸಮುದಾಯ ಹಿಂದಿನಿಂದಲೂ ಕಾಂಗ್ರೆಸ್ ಬೆಂಬಲಕ್ಕಿದೆ.' ಎಂದು ಸುರ್ಜೇವಾಲಾ ಬಳಿ ಪ್ರಸ್ತಾಪವಿಟ್ಟಿದ್ದಾರೆ.
ಸಮುದಾಯದ ಯಾರಿಗೆ ಬೇಕಾದರೂ ಅವಕಾಶ ಕೊಡಿ. ನಾಲ್ಕೈದು ಮಂದಿ ಆಕಾಂಕ್ಷಿಗಳಿದ್ದೇವೆ ಎಂದು ಬೇಡಿಕೆ ಸಲ್ಲಿಸಿದರು. ಈಗಾಗಲೇ ಕೆಪಿಸಿಸಿ ಅಧ್ಯಕ್ಷರಿಗೂ ಬೇಡಿಕೆ ಇಟ್ಟಿದ್ದ ಎಡಗೈ ನಾಯಕರಾದ ಮಾಜಿ ಸಚಿವ ಆಂಜನೇಯ, ರಾಜ್ಯಸಭೆ ಸದಸ್ಯ ಎಲ್. ಹನುಮಂತಯ್ಯ, ವಿಧಾನಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪೂರ ಕೆಕೆಗೆಸ್ಟ್ ಹೌಸ್ನಲ್ಲಿ ಸುರ್ಜೇವಾಲಾರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಸುರ್ಜೆವಾಲಾ ಭೇಟಿ ನಂತರ ಮಾತನಾಡಿದ ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ, ಸುರ್ಜೇವಾಲರ ಮುಂದೆ ಬೇಡಿಕೆ ಇಟ್ಟಿದ್ದೇವೆ. ಬಹುತೇಕ ಸಮುದಾಯಗಳಿಗೆ ಕಾರ್ಯಾಧ್ಯಕ್ಷ ಸ್ಥಾನ ಸಿಕ್ಕಿದೆ. ಮಾದಿಗ ಸಮುದಾಯಕ್ಕೆ ಕಾರ್ಯಾಧ್ಯಕ್ಷ ಸ್ಥಾನ ಕೊಡಬೇಕು. ಚುನಾವಣೆ ದೃಷ್ಟಿಯಿಂದ ಇದು ಪೂರಕವಾಗಿದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಮಾಜಿ ಸಚಿವ ಆಂಜನೇಯ ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿ ನಾವು ಪ್ರಬಲ ಸಮುದಾಯ. ಎಡಗೈ ಸಮುದಾಯ ಹೆಚ್ಚಿದೆ, ಹಾಗಾಗಿ ಕಾರ್ಯಾಧ್ಯಕ್ಷ ಹುದ್ದೆ ಕೇಳಿದ್ದೇವೆ. ಅಧಿಕಾರಕ್ಕೆ ತರಲು ಪಕ್ಷವನ್ನು ಸಜ್ಜುಗೊಳಿಸಬೇಕಿದೆ. ಹಾಗಾಗಿ ಕಾರ್ಯಾಧ್ಯಕ್ಷ ಸ್ಥಾನ ಕೇಳಿದ್ದೇವೆ, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.