ಬೆಂಗಳೂರು: ಬೆಂಗಳೂರನ್ನು ಡ್ರಗ್ಸ್ ಮುಕ್ತ ನಗರವನ್ನಾಗಿಸುವ ನಿಟ್ಟಿನಲ್ಲಿ ನಗರದ ಪೊಲೀಸರು ಮಾದಕ ಜಾಲದ ವಿರುದ್ಧ ಸಮರ ಸಾರಿದ್ದು, ಬೃಹತ್ ಜಾಲಗಳನ್ನು ಬಯಲಿಗೆಳೆಯುತ್ತಿದ್ದಾರೆ.
ಮಾದಕ ಜಾಲಗಳ ಬೆನ್ನತ್ತಿರುವ ಆಗ್ನೇಯ ವಿಭಾಗ ಪೊಲೀಸರು ಭರ್ಜರಿ ಭೇಟೆಯಾಡಿ, 11 ಜನ ಆರೋಪಿಗಳನ್ನು ಬಂಧಿಸಿ ಬರೋಬ್ಬರಿ 117 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಅಷ್ಟೇ ಅಲ್ಲ, ತಮಿಳುನಾಡು ಮೂಲದ 9 ಜನ ಆರೋಪಿಗಳನ್ನು ವಶಕ್ಕೆ ಪಡೆದಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು, 25 ಲಕ್ಷ ಮೌಲ್ಯದ 57 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಲಾಕ್ ಡೌನ್ ಫ್ರೀ ಆದ ನಂತರ ಹೊರ ರಾಜ್ಯಗಳಿಂದ ನಗರಕ್ಕೆ ಗಾಂಜಾ ಸರಬರಾಜು ಮಾಡುತ್ತಿದ್ದ ಬಾಲರಾಜು, ಗೋಪಿನಾಥ್, ವಿನೋದ್, ಸಿ. ಮನೋಹರ, ಕೆ.ಪಾಲ್‌ಪಾಂಡಿ, ವೈಕಾಟು ಬಿನ್ನು, ಮದನ್ ಕುಮಾರ್, ಕೆ. ಬಾಲಗುರು, ಸೆಲ್ವಂ ಎಂಬುವವರನ್ನು ಬಂಧಿಸಿದ್ದಾರೆ.
ಇತ್ತ ತಿಲಕನಗರ ಪೊಲೀಸರು ಮಹಮ್ಮದ್ ಫಾರೂಕ್ ಹಾಗೂ ಮಹಮ್ಮದ್ ಎಂಬ ಇಬ್ಬರನ್ನು ಬಂಧಿಸಿ 30 ಲಕ್ಷ ಮೌಲ್ಯದ 60 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಈ ಗಾಂಜಾ ಅನ್ನೋದು ಮೊದಲಿನಿಂದಲೂ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಸರಬರಾಜು ಆಗುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ವಿದೇಶಿ ಮೂಲದ ಮಾದಕ ಎಂಟ್ರಿ ಸಹ ಜಾಸ್ತಿಯಾಗ್ತಿದೆ. ಸ್ಯಾಂಡಲ್‌ವುಡ್ ಲಿಂಕ್ ಬಯಲಾದ ಬಳಿಕ ಮತ್ತಷ್ಟು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಸಂಪೂರ್ಣವಾಗಿ ಗಾಂಜಾ ಹಾವಳಿಯನ್ನ ನಿಯಂತ್ರಿಸುವ ಪಣ ತೊಟ್ಟಿದ್ದಾರೆ.