ಬೆಂಗಳೂರು: ವನ್ಯಜೀವಿಗಳ ದಾಳಿಗೆ ತುತ್ತಾಗುವ ವೇಳೆ ನೀಡಲಾಗುವ ಪರಿಹಾರದ ಹಣದ ಮೊತ್ತವನ್ನು10 ಲಕ್ಷ ರೂಗೆ ಹೆಚ್ಚಿಸಲು ಮತ್ತು 5 ವರ್ಷಗಳವರೆಗೆ ನೀಡಲಾಗುವ 2 ಸಾವಿರ ರೂ. ಮಾಸಾಶನವನ್ನು 5 ಸಾವಿರ ರೂ.ಗೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಶೂನ್ಯ ವೇಳೆಯಲ್ಲಿ ಶಾಸಕರಾದ ಎ.ಟಿ.ರಾಮಸ್ವಾಮಿ, ಎಚ್.ಕೆ. ಕುಮಾರಸ್ವಾಮಿ, ಬಿಜೆಪಿ ಶಾಸ ಅಪ್ಪಚ್ಚುರಂಜನ್ ಕಾಡಾನೆಗಳ ದಾಳಿ ಬಗ್ಗೆ ಸರ್ಕಾರದ ಗಮನ ಸೆಳೆದರು.
ಅರಣ್ಯದಲ್ಲಿ ನೀರು, ಮೇವು ಸಿಗದೆ ಆನೆ ಮತ್ತಿತರ ಕಾಡು ಪ್ರಾಣಿಗಳು ನಾಡಿಗೆ ನುಗ್ಗುತ್ತಿವೆ. ಈ ಆನೆಗಳನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಗಳಿಗೆ ಓಡಿಸಲಾಗುತ್ತಿದೆ. ಅರಣ್ಯಇಲಾಖೆ ತೋಡುತ್ತಿರುವ ಕಂದಕಗಳು, ಸೋಲಾರ್ ಬೇಲಿಗಳು ಪ್ರಯೋಜನಕ್ಕೆ ಬರುತ್ತಿಲ್ಲ. ಕಾಡಿನಲ್ಲಿ ಟೀಕು ಹಾಗೂ ಮತ್ತಿತರ ಮರಗಳನ್ನು ಕಡಿದು ವನ್ಯ ಜೀವಿಗಳಿಗೆ ಅಗತ್ಯವಾದ ಹತ್ತಿ, ಹಲಸು, ಮಾವಿನ ಮರಗಳನ್ನು ಬೆಳೆಸಬೇಕೆಂದು ಸಲಹೆ ನೀಡಿದರು.
ನಂತರ ಮಾತನಾಡಿದ ಸಚಿವ ಆನಂದ್ ಸಿಂಗ್, 2017ರ ನಂತರದಲ್ಲಿ ಕಾಡಾನೆಗಳ ಹಾವಳಿ ಕಡಿಮೆಯಾಗಿದೆ. ಕಾಡಿನಲ್ಲಿ ಮೇವು ಸಿಗದೆ ವನ್ಯ ಜೀವಿಗಳು ನಾಡಿಗೆ ನುಗ್ಗುತ್ತಿವೆ. ಅರಣ್ಯ ಇಲಾಖೆಯಿಂದ ತೋಡಲಾಗಿರುವ ಕಂದಕಗಳು 6 ತಿಂಗಳ ನಂತರ ಮುಚ್ಚಿ ಹೋಗುತ್ತವೆ. ಮಳೆ ಇಲ್ಲದೆ ಕಾಡಿನಲ್ಲಿ ನೀರಿನ ಅಭಾವ ತಲೆದೋರಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಅರಣ್ಯ ವ್ಯಾಪ್ತಿ ಪ್ರದೇಶಕ್ಕೆ ಒಳಪಡುವ ಶಾಸಕರ ಸಭೆ ಕರೆದು ಈ ಬಗ್ಗೆ ಚರ್ಚಿಸಿ ಸಲಹೆ ಪಡೆಯುತ್ತೇನೆ ಎಂದು ಹೇಳಿದರು.
ವನ್ಯಜೀವಿಗಳಿಂದ ಹಾನಿಯಾದ ಕುಟುಂಬದವರಿಗೆ 5 ಲಕ್ಷ ರೂ ಪರಿಹಾರ ನೀಡಲಾಗುತ್ತಿತ್ತು. ಸದ್ಯ ಅದನ್ನು 7.5 ಲಕ್ಷ ರೂಗೆ ಹೆಚ್ಚಿಸಲಾಗಿದೆ, ಇದನ್ನು ಮುಂದಿನ ದಿನಗಳಲ್ಲಿ 10 ಲಕ್ಷಕ್ಕೆ ಹೆಚ್ಚಿಸಬೇಕು ಎಂಬ ಪ್ರಸ್ತಾವನೆ ಇದ್ದು, ಹಣಕಾಸು ಇಲಾಖೆಯ ಪರಿಶೀಲನೆಯಲ್ಲಿದೆ ಎಂದರು.