ಬೆಂಗಳೂರು : ಬಿಜೆಪಿ ತೊರೆಯುವುದಿದ್ದರೆ ಡಿಕೆಶಿ ನಿವಾಸಕ್ಕೆ ಬ್ಯಾಕ್ ಡೋರ್ನಲ್ಲಿ ಹೋಗುತ್ತಿದ್ದೆ ಹೊರತು ನೇರವಾಗಿ ಹೋಗುತ್ತಿರಲಿಲ್ಲ. ಯಾವ ಕಾರಣಕ್ಕೂ ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ನಮ್ಮ ನಾಯಕರಿಗೂ ಮಾಹಿತಿ ನೀಡಿದ್ದೇನೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಡಿ.ಕೆ.ಶಿವಕುಮಾರ್ ಮನೆಗೆ ಹೋಗಬಾರದಿತ್ತು. ಈಗ ಅರಿವಿಗೆ ಬಂದಿದೆ, ನಾನು ಸ್ನೇಹದ ದೃಷ್ಟಿಯಿಂದ ಹೋಗಿದ್ದು. ಆದರೆ, ಅದರ ಬಗ್ಗೆ ಆಗುವ ಬೆಳವಣಿಗೆಗಳ ಬಗ್ಗೆ ಆಲೋಚನೆ ಮಾಡಿರಲಿಲ್ಲ.
ನಾನು ಹೋಗಿದ್ದ ಸನ್ನಿವೇಶ ಸರಿ ಇರಲಿಲ್ಲ. ಭೇಟಿ ಬಗ್ಗೆ ಸಿಎಂ ಹಾಗೂ ಯಡಿಯೂರಪ್ಪ ಇಬ್ಬರಿಗೂ ವಿವರಣೆ ಕೊಟ್ಟು ಸ್ಪಷ್ಟನೆ ಕೊಟ್ಟಿದ್ದೇನೆ ಎಂದು ವಿವರಿಸಿದರು. ಬಿಜೆಪಿ, ಯಡಿಯೂರಪ್ಪ ನಮಗೆ ವಿಜಯನಗರ ಜಿಲ್ಲೆ ಕೊಟ್ಟವರು, ಬಿಜೆಪಿ ಪಕ್ಷವನ್ನು ಬಿಡುವ ಬಗ್ಗೆ ಯೋಚನೆಯನ್ನೂ ಮಾಡಲ್ಲ.
ಆ ರೀತಿ ಹೋಗಬೇಕು ಅಂದರೆ ಬ್ಯಾಕ್ ಡೋರ್ ಎಂಟ್ರಿ ಬೇರೆ ಇವೆ, ಹಾಗಿದ್ದರೆ ನೇರವಾಗಿ ಏಕೆ ಭೇಟಿ ಮಾಡಬೇಕಿತ್ತು ನಾನು!? ಮಾಧ್ಯಮಗಳು ನನ್ನ ಸಂಶಯ ದೃಷ್ಟಿಯಿಂದ ನೋಡಿದವು ಅಂತಾ ಹೇಳಲ್ಲ. ನಾನೇ ಅದಕ್ಕೆ ಅವಕಾಶ ಮಾಡಿಕೊಡಬಾರದಿತ್ತು ಅನ್ನಿಸಿದೆ ಎಂದು ಹೇಳಿದರು.
ಖಾತೆ ಬಗ್ಗೆ ಅಸಮಧಾನ ಇಲ್ಲ : ಪ್ರವಾಸೋದ್ಯಮ ಖಾತೆಯಲ್ಲೇ ನಾನು ಹ್ಯಾಪಿಯಾಗಿದ್ದೇನೆ. ಈ ಹಿಂದೆ ಖಾತೆ ಬದಲಾವಣೆ ಮಾಡಿ ಎಂದು ಕೇಳಿದ್ದು ನಿಜ. ಆದರೆ, ಈಗ ಕೊಟ್ಟಿರುವ ಖಾತೆಯಲ್ಲೇ ಸಮರ್ಥವಾಗಿ ಕೆಲಸ ಮಾಡುತ್ತಿದ್ದೇನೆ. ಮುಂದೆಯೂ ಇದೆ ಖಾತೆಯಲ್ಲೇ ಮುಂದುವರಿಯುತ್ತೇನೆ. ಕೊಟ್ಟಿರುವ ಖಾತೆಯಿಂದ ನನಗೆ ಯಾವುದೇ ಅಸಮಾಧಾನ ಇಲ್ಲ ಎಂದರು.
ಕರ್ನಾಟಕದಲ್ಲಿ ಹಿಜಾಬ್ ವಿವಾದ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ಸಚಿವ ಆನಂದ್ ಸಿಂಗ್, ಸಂವಿಧಾನ ಎಲ್ಲರಿಗೂ ಒಂದೇ. ಇದು ಸರ್ಕಾರದ ವಿಚಾರ ಅಲ್ಲ. ಸಂವಿಧಾನದ ಪ್ರಕಾರ ಎಲ್ಲರೂ ನಡೆದುಕೊಳ್ಳಬೇಕು, ಸಮಾನತೆ ಇರಬೇಕು ಎಂದರು.