ಬೆಂಗಳೂರು: ಆನಂದ್ ಸಿಂಗ್ ಜಿಂದಾಲ್ ವಿಚಾರದ ಬಗ್ಗೆ ನನ್ನ ಜೊತೆ ಮಾತಾಡಿಲ್ಲ. ಆದ್ರೆ ಜಿಂದಾಲ್ಗೆ ಜಮೀನು ಪರಭಾರೆ ವಿಚಾರ ಸಂಬಂಧ ವಿಸ್ತೃತ ಪತ್ರ ಬರೆದಿದ್ದಾರೆ ಎಂದು ಗೃಹ ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾತನಾಡಿ, ರಾಜೀನಾಮೆ ನೀಡಲು ಒಂದು ಪದ್ಧತಿ ಇದೆ. ಸೋಮವಾರ ಮೀಟಿಂಗ್ ಇದ್ದು, ಅಲ್ಲಿ ಹೆಚ್ ಕೆ ಪಾಟೀಲ್ ಹಾಗೂ ಆನಂದ್ ಸಿಂಗ್ ಅವರು ಬರೆದಿರುವ ಪತ್ರದ ಬಗ್ಗೆ ಮಾತನಾಡುತ್ತೇವೆ. ಸಂಪೂರ್ಣ ಎಲ್ಲವನ್ನೂ ಅಧ್ಯಯನ ಮಾಡುತ್ತೇವೆ. ಆಳವಾಗಿ ಹೋಗಿ ಅಧ್ಯಯನ ಮಾಡಿ ರಿಪೋರ್ಟ್ ಸಲ್ಲಿಸುತ್ತೇವೆ. ಅಗತ್ಯ ಬಿದ್ರೆ ಜಿಂದಾಲ್ ಅವರನ್ನು ಕರೆಸಿಕೊಳ್ಳುತ್ತೇವೆ ಎಂದರು.
ನಿಯಮಾನುಸಾರವಾಗಿಯೇ ರಾಜೀನಾಮೆ ನೀಡಬೇಕು. ಅದು ಬಿಟ್ಟು ಎಲ್ಲೋ ಕುಳಿತು ರಾಜೀನಾಮೆ ನೀಡಿದ್ರೆ ಆಗಲ್ಲ ಎಂದು ರಮೇಶ್ ಜಾರಕಿಹೊಳಿಗೆ ತಿರುಗೇಟು ನೀಡಿದರು.
ಪೊಲೀಸ್ ಇಲಾಖೆಯಲ್ಲಿ ಬದಲಾವಣೆ:
ನೀತಿ ಸಂಹಿತೆ ಬರುವುದಕ್ಕೆ ಮುಂಚಿತವಾಗಿ ಒಂದು ಕಮಿಟಿ ರಚನೆ ಮಾಡಿದ್ದೆ. ಡಿಜಿ ಅವರ ನೇತೃತ್ವದಲ್ಲಿ ಒಂದು ಸಮಿತಿ ವರದಿಕೊಟ್ಟಿದೆ. ಆ ವರದಿಯಲ್ಲಿ ಬಹಳಷ್ಟು ವಿಚಾರಗಳಿವೆ ಎಂದರು.
ಒಂದು ಕೋ ಆರ್ಡಿನೇಷನ್ ಕಮಿಟಿ ಕೂಡ ಮಾಡಿದ್ದೇವೆ. ಒಬ್ಬರ ಮೇಲೆ ಒಬ್ಬರು ಆಪಾದನೆ ಮಾಡಬಾರದು. ತನಿಖೆಯಲ್ಲಿ ನಮ್ಮ ಪೊಲೀಸರು ಏನು ಕೆಲಸ ಮಾಡಬೇಕು. ಚಾರ್ಜ್ಶೀಟ್ ಹಾಕಿದ ಮೇಲೆ ಪ್ರತಿಯೊಬ್ಬರ ರೋಲ್ ಏನು ಇರುತ್ತದೆ. ಅದೆಲ್ಲವನ್ನು ಮೌಲ್ಯಮಾಪನ ಮಾಡುವಂತಹದ್ದು. ಒಟ್ಟಿನಲ್ಲಿ ಅಪರಾಧ ಸಾಬೀತು ಪ್ರಮಾಣ ಹೆಚ್ಚಾಗಬೇಕು. ನ್ಯಾಯ ಸಿಗಬೇಕು. ಈ ಎಲ್ಲಾ ಮಾರ್ಪಾಡುಗಳನ್ನು ನಾವು ಮಾಡಲು ಹೊರಟಿದ್ದೇವೆ ಎಂದರು.
ನಮ್ಮ ಪೊಲೀಸ್ ಇಲಾಖೆಯಲ್ಲಿ ಬದಲಾವಣೆಗಳನ್ನು ತರುತ್ತೇವೆ. ಜನರಿಗೆ ಹಾಗೂ ರಾಜ್ಯಕ್ಕೆ ಒಳ್ಳೆಯದಾಗಬೇಕು ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಪೊಲೀಸ್ ಅಕಾಡೆಮಿ ಶಕ್ತಿ ಹೆಚ್ಚಿಸಬೇಕಿದೆ. ಇವೆಲ್ಲವನ್ನು ಕೆಲವು ನಿಮಿಷಗಳಲ್ಲಿ ಹೇಳಲು ಆಗಲ್ಲ. ಜನ ಸ್ನೇಹಿ ಆಗಿರಬೇಕು ಎಂದು ಪೊಲೀಸ್ ಇಲಾಖೆಯಲ್ಲಿ ರಿಫಾರ್ಮ್ ತರುತ್ತಿದ್ದೇನೆ ಎಂದರು.
ಸಾಮಾಜಿಕ ಜಾಲತಾಣ ತಳಹದಿ ತೆರೆಯಲಾಗುವುದು. ಅಲ್ಲಿ ಜನ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು. ಜನರ ಹತ್ತಿರ ಪೊಲೀಸ್ ಹೋಗಬೇಕು, ಜನರ ಸ್ನೇಹಿಯಾಗಿ ಪೊಲೀಸ್ ಇಲಾಖೆ ಕೆಲಸ ಮಾಡಬೇಕು. ಸಮಗ್ರ ಬದಲಾವಣೆಯನ್ನು ಇಲಾಖೆಯಲ್ಲಿ ತರಬೇಕಿದೆ ಎಂದು ವಿವರಿಸಿದರು.