ಬೆಂಗಳೂರು : ವಿಧಾನಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ ಸದನದ ಹೊರಗೆ ಸದಸ್ಯರ ಪ್ರತಿಕ್ರಿಯೆ ತೆಗೆದುಕೊಳ್ಳಲು ಮುಂದಾದಾಗ ಪೊಲೀಸರು ಮಾಧ್ಯಮದವರ ಜೊತೆ ವಾಗ್ವಾದ ನಡೆಸಿ ಹೊರ ಹಾಕಿದ ಘಟನೆ ನಡೆಯಿತು.
ಚಿತ್ರೀಕರಣ ಮಾಡದಂತೆ ಅಡ್ಡಿಪಡಿಸಿದ ಪೊಲೀಸರು, ಮಾಧ್ಯಮದವರನ್ನು ತಳ್ಳಿದರು. ಆಗ ಎರಡೂ ಕಡೆ ಮಾತಿನ ಚಕಮಕಿ ನಡೆದು ತಳ್ಳಾಟ-ನೂಕಾಟ ನಡೆಯಿತು. ವಿಧಾನಪರಿಷತ್ನ ಮುಂದಿನ ಎರಡು ಬದಿಯಲ್ಲಿ ಬಾಗಿಲು ಮುಚ್ಚಿ ಮಾಧ್ಯಮದವರನ್ನು ಹೊರಗೆ ಕಳುಹಿಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಭಾಪತಿ ಪೀಠಕ್ಕೆ ಬಂದು ಗಲಾಟೆ ಮಾಡಿದ್ದಾರೆ. ಬೆಲ್ ಆಗುತ್ತಿರುವಾಗಲೇ ಉಪಸಭಾಪತಿ ಅವರು ಪೀಠದಲ್ಲಿ ಕುಳಿತುಕೊಂಡಿದ್ದಾರೆ. ಇದು ಸಭಾಪತಿ ಪೀಠಕ್ಕೆ ಮಾಡಿದ ಅವಮಾನ ಎಂದರು. ಇದಕ್ಕೆ ಮತ್ತೊಬ್ಬ ಸದಸ್ಯ ವೆಂಕಟೇಶ್ ಅವರು, ಪರಿಷತ್‌ನಲ್ಲಿ ನಡೆದ ವರ್ತನೆ ಖಂಡಿಸಿದರು.