ಬೆಂಗಳೂರು: ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ತಲೆಮರೆಸಿಕೊಂಡಿದ್ದಾರೆ. ಆದರೆ, ಆತನಿಗೆ ಹಾಗೂ ಮಾಜಿ ಕಾರ್ಪೊರೇಟರ್ ಜಾಕೀರ್ಗೆ ಆಶ್ರಯ ನೀಡಿದ್ದ ಆರೋಪಿ ರಿಯಾಜುದ್ದೀನ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಸಂಪತ್ ರಾಜ್ ಹಾಗೂ ಜಾಕೀರ್ ಪಾತ್ರವಿರುವುದು ಅತ್ಯಂತ ಸ್ಪಷ್ಟವಾಗಿದೆ. ಆರೋಪಿಗಳ ಬಂಧನಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದೇವೆ, ವಿಶೇಷ ತಂಡ ರಚಿಸಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದೇವೆ.
ಆರೋಪಿಗಳು ತಲೆಮರೆಸಿಕೊಳ್ಳಲು ನೆರವು ಹಾಗೂ ಆಶ್ರಯ ನೀಡಲು ಸಹಕರಿಸಿದ್ದ ರಿಯಾಜುದ್ದೀನ್ ಎಂಬಾತನನ್ನು ಈಗಾಗಲೇ ಬಂಧಿಸಲಾಗಿದೆ. ಈತ ನೀಡಿದ ಸುಳಿವು ಆಧರಿಸಿ ತಪ್ಪಿತಸ್ಥರನ್ನು ಶೀಘ್ರದಲ್ಲೇ ದಸ್ತಗಿರಿ ಮಾಡಲಿದ್ದೇವೆ. ಸದ್ಯ ಆರೋಪಿಯನ್ನು ನಾಗರಹೊಳೆ ಫಾರ್ಮ್ ಹೌಸ್ನಲ್ಲಿ ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.
ಸಂಪತ್ ರಾಜ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದ ಹೈಕೋರ್ಟ್, ಸಂಪತ್ ರಾಜ್ನನ್ನು ಪತ್ತೆ ಹಚ್ಚಿ ಬಂಧಿಸಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಜರುಗಿಸುವಂತೆ ಪೊಲೀಸರಿಗೆ ನಿರ್ದೇಶಿಸಿತ್ತು. ಅಲ್ಲದೆ ಮುಂದಿನ ವಿಚಾರಣೆ ವೇಳೆ ತನಿಖಾ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸೂಚಿಸಿತ್ತು.