ಬೆಂಗಳೂರು: ಫ್ರೀಡಂ ಪಾರ್ಕ್ನಲ್ಲಿ ನಡೆದ ಸಿಎಎ ವಿರೋಧಿ ಸಮಾವೇಶದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಅಮೂಲ್ಯ ದೇಶದ್ರೋಹದ ಕೇಸ್ನಲ್ಲಿ ಬಂಧನಕ್ಕೀಡಾಗಿದ್ದು, ಸದ್ಯ ಅಮೂಲ್ಯಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ಬಸವೇಶ್ವರ ನಗರ ಠಾಣೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.
ಇನ್ನು ಅಮೂಲ್ಯಳಿಗೆ ಮುಂಜಾನೆ ತಿಂಡಿ, ಮಧ್ಯಾಹ್ನ ಊಟ, ಸಂಜೆ ತಿಂಡಿ ನೀಡಿ ಚೆನ್ನಾಗಿ ಆರೈಕೆ ಮಾಡಿದ ಕಾರಣ ಪೊಲೀಸರೆಂದರೆ ಕೆಟ್ಟ ಭಾವನೆ ಇತ್ತು. ಆದರೆ ಪೊಲೀಸರು ನನ್ನ ಇಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿರುವುದಕ್ಕೆ ಖುಷಿಯಾಗ್ತಿದೆ ಎಂದು ತನಿಖಾಧಿಕಾರಿಗಳ ಎದುರು ಅಮುಲ್ಯ ತಿಳಿಸಿದ್ದಾಳೆ ಎನ್ನಲಾಗಿದೆ.
ಇನ್ನು 4 ದಿನಗಳ ಕಾಲ ಅಮೂಲ್ಯಳನ್ನು ಕಸ್ಟಡಿಗೆ ಪಡೆದಿರುವ ಎಸ್ಐಟಿ ತಂಡ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಅಮೂಲ್ಯಳಿಗೆ ರೂಮ್ ಮೇಟ್ ಆರ್ದ್ರಾ ಕುರಿತಾದ ಪ್ರಶ್ನೆಗಳನ್ನ ಕೇಳಲಾಗಿದೆ. ಆದರೆ ಇದಾವುದಕ್ಕೂ ಉತ್ತರ ನೀಡಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಪತ್ರಕರ್ತೆ ಗೌರಿ ಲಂಕೇಶ್ ಕುರಿತು ಪ್ರಶ್ನೆಗೆ ಸ್ಪಂದಿಸಿರುವ ಅಮೂಲ್ಯ, ಗೌರಿ ಲಂಕೇಶ್ ಹೆಸರು ಕೇಳುತ್ತಲೇ 15 ನಿಮಿಷಗಳ ಕಾಲ ಕಣ್ಣೀರಿಟ್ಟಿದ್ದಾಳಂತೆ. ಗೌರಿ ನನ್ನ ತಾಯಿ ಇದ್ದ ಹಾಗೆ ಎಂದು ಉತ್ತರಿಸಿದ್ದಾಳೆಂದು ತಿಳಿದು ಬಂದಿದೆ. ಸದ್ಯ ಬಸವೇಶ್ವರ ನಗರ ಪೊಲೀಸ್ ಕಸ್ಟಡಿಯಲ್ಲಿರುವ ಅಮೂಲ್ಯಳನ್ನು, ತೀವ್ರ ವಿಚಾರಣೆಗೆ ಒಳಪಡಿಸಿರುವ ಎಸಿಪಿ ಮಹಾಂತೇಶ್ ರೆಡ್ಡಿ ನೇತೃತ್ವದ ತಂಡ, ತನಿಖೆಯ ಪ್ರತಿ ಹೇಳಿಕೆಯನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದಾರೆ.