ಬೆಂಗಳೂರು: ಆ್ಯಂಬುಲೆನ್ಸ್ಗಳ ಸುಗಮ ಸಂಚಾರಕ್ಕೆಂದು ಕರೆಯಲಾಗಿದ್ದ ಟೆಂಡರ್ ಅನ್ನು ತಜ್ಞರ ಅಭಿಪ್ರಾಯ ಪಡೆಯದೇ ರದ್ದು ಮಾಡಿದ್ದೇಕೆ ಎಂದು ಸರ್ಕಾರವನ್ನು ಪ್ರಶ್ನಿಸಿರುವ ಹೈಕೋರ್ಟ್ ಈ ಕುರಿತು ಫೆಬ್ರವರಿ 1ರೊಳಗೆ ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಆ್ಯಂಬುಲೆನ್ಸ್ಗಳ ಸುಗಮ ಸಂಚಾರಕ್ಕೆ ಸಂಬಂಧಿಸಿದಂತೆ ಭಾರತ ಪುನರುತ್ಥಾನ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸರ್ಕಾರದ ಪರ ವಕೀಲರು ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿದ ಪೀಠ, ಟೆಂಡರ್ ರದ್ದುಗೊಳಿಸಿರುವ ಕ್ರಮಕ್ಕೆ ಅಚ್ಚರಿ ವ್ಯಕ್ತಪಡಿಸಿತು.
ಆರೋಗ್ಯ ಸಚಿವರ ಸೂಚನೆಯಂತೆ ಟೆಂಡರ್ ಪ್ರಕ್ರಿಯೆ ರದ್ದುಪಡಿಸಲಾಗಿದೆ ಎಂದು ಕಡತದಲ್ಲಿ ಉಲ್ಲೇಖಿಸಲಾಗಿದೆ. ಟೆಂಡರ್ ನಲ್ಲಿ ಯಾರೋ ಆಸಕ್ತಿ ಹೊಂದಿರುವಂತೆ ಕಾಣುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿತು. ಅಲ್ಲದೇ, ಟೆಂಡರ್ ನಲ್ಲಿ ಅಕ್ರಮವಿದ್ದರೆ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಟೆಂಡರ್ ಪ್ರಕ್ರಿಯೆಯನ್ನೇ ರದ್ದು ಮಾಡಲಾಗಿದೆ. ತಜ್ಞರ ಅಭಿಪ್ರಾಯ ಪಡೆಯದೇ ಟೆಂಡರ್ ರದ್ದುಪಡಿಸಿದ್ದೇಕೆ ಎಂದು ಪ್ರಶ್ನಿಸಿದ ಪೀಠ, ಈ ಕುರಿತು ಫೆಬ್ರವರಿ 1ರೊಳಗೆ ಪ್ರಮಾಣ ಪತ್ರ ಸಲ್ಲಿಸಿ ಎಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.
ಸಂಚಾರ ದಟ್ಟಣೆ ಮಧ್ಯೆಯೂ ಆ್ಯಂಬುಲೆನ್ಸ್ ಗಳ ಮೂಲಕ ರೋಗಿಗಳನ್ನು ಸುಗಮವಾಗಿ ಸಾಗಿಸಲು ಸರ್ಕಾರ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್ ನಿರ್ವಹಣಾ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿತ್ತು. ಅದಕ್ಕಾಗಿ 1800 ಕೋಟಿ ವೆಚ್ಚದ ಟೆಂಡರ್ ಕರೆದಿತ್ತು. ಆದರೆ ಪ್ರಕ್ರಿಯೆಯಲ್ಲಿ ಅಕ್ರಮಗಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಟೆಂಡರ್ ರದ್ದು ಮಾಡಲಾಗಿತ್ತು. ಸಾವಿರಾರು ಕೋಟಿ ಮೊತ್ತದ ಟೆಂಡರ್ ರದ್ದು ಮಾಡಿದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದ ಹೈಕೋರ್ಟ್, ಆ ಸಂಬಂಧಿತ ಕಡತ ಸಲ್ಲಿಸಲು ನಿರ್ದೇಶಿಸಿತ್ತು.