ಬೆಂಗಳೂರು: ಕರ್ನಾಟಕ ದ್ವಜ ಮತ್ತು ಲಾಂಛನವುಳ್ಳ ಮಹಿಳೆಯರ ಒಳ ಉಡುಪಿನ ಚಿತ್ರವನ್ನು ಪ್ರಕಟಿಸಿದ್ದ ಅಮೆಜಾನ್ ಇ-ಕಾಮರ್ಸ್ ಸಂಸ್ಥೆ, ಕನ್ನಡಿಗರಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ವಿವಾದಿತ ಪೋಟೋವನ್ನು ತೆಗೆದುಹಾಕಿದೆ. ಆದರೆ ವಿವರಣೆಯಲ್ಲಿರುವ ಕರ್ನಾಟಕ ಧ್ಯಜ ಎಂಬ ಪದವನ್ನು ತೆಗೆದುಹಾಕುವುದನ್ನು ಮರೆತಿದೆ.
ಎರಡು ದಿನಗಳ ಹಿಂದೆಯಷ್ಟೇ ಗೂಗಲ್ ಕನ್ನಡ ಭಾಷೆಯನ್ನು ಕೊಳಕು ಭಾಷೆ ಎಂದು ತೋರಿಸಿ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿ, ನಂತರ ಕ್ಷಮೆ ಕೋರಿತ್ತು. ಇದೀಗ ಅಮೆಜಾನ್ ಕೆನಡಾ ವೆಬ್ ಸೈಟ್ನಲ್ಲಿ ಕರ್ನಾಟಕ ಧ್ವಜದ ಒಳ ಉಡುಪನ್ನು ಮಾರಾಟಕ್ಕಿಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು.
ಫೋಟೋ ಮಾತ್ರ ಡಿಲೀಟ್, ಹಾಗೆ ಉಳಿದ ಕರ್ನಾಟಕ ಧ್ವಜ ಎಂಬ ಹೆಸರು
ಕನ್ನಡಿಗರ ಆಕ್ರೋಶದ ವಿವಾದಿತ ಒಳ ಉಡುಪಿನ ಫೋಟೋವನ್ನು ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಮಾಡಿ, ಅಮೆಜಾನ್ ವಿರುದ್ಧ ಲಕ್ಷಾಂತರ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಎಚ್ಚೆತ್ತ ಅಮೆಜಾನ್ ತನ್ನ ವೆಬ್ಸೈಟ್ನಲ್ಲಿ ವಿವಾದಕ್ಕೆ ಕಾರಣವಾದ ಕರ್ನಾಟಕ ಧ್ವಜವಿರುವ ಫೋಟೋವನ್ನು ಡಿಲೀಟ್ ಮಾಡಿದೆ. ಬೇರೆ ಬಿಕಿನಿ ಫೋಟೋವನ್ನು BKDMHHH ಬ್ರ್ಯಾಂಡ್ ಜಾಹಿರಾತಿ ಬಳಸಿದೆ. ಆದರೆ ಬ್ರ್ಯಾಂಡ್ ವಿವರಣೆಯಲ್ಲಿ ಮಾತ್ರ Flag of Karnataka ಎಂದು ಉಳಿದಿದೆ.
ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅಸಮಾಧಾನ:
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ, ನಮ್ಮ ಕನ್ನಡದ ಬಾವುಟ ಮತ್ತು ಭಾರತದ ಲಾಂಛನದಲ್ಲಿರುವ ಅಶೋಕ ಚಕ್ರವುಳ್ಳ ಒಳಉಡುಪು ಮಾರಾಟಕ್ಕಿಟ್ಟಿರುವುದು ಕನ್ನಡಿಗರಿಗೆ ತೀವ್ರ ನೋವುಂಟು ಮಾಡಿದೆ. ಸಿಎಂ ಹಾಗೂ ಗೃಹ ಸಚಿವರು ಇಂಥ ದುಷ್ಟ ಶಕ್ತಿಗಳನ್ನು ಬಗ್ಗು ಬಡಿಯಬೇಕು. ಆ ಸಂಸ್ಥೆಯು ಕನ್ನಡಿಗರ ಕ್ಷಮೆಯಾಚಿಸಬೇಕು. ರಾಜ್ಯ ಸರ್ಕಾರ ಕನ್ನಡಿಗರಿಗಾಗಿಯೇ ಒಂದು ಸೈಬರ್ ಕ್ರೈಂ ಸೆಲ್ ಶುರು ಮಾಡಬೇಕು ಎಂದು ಆಗ್ರಹಿಸಿದ್ದರು.
ಇದೇ ರೀತಿ ಕನ್ನಡಿಗರಿಗೆ ಅವಮಾನ ಮಾಡಿದರೆ ಮಸ್ಕಾ ಚಳವಳಿ ಬಿಟ್ಟು ಮಚ್ಚು ಚಳವಳಿ ಮಾಡಬೇಕಾಗುತ್ತದೆ ಎಂದು ಕನ್ನಡ ವಿರೋಧಿ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ.
ಇದನ್ನು ಓದಿ:ಅಮೆಜಾನ್ಗೂ ತಟ್ಟಿದ ಕನ್ನಡಿಗರ ಆಕ್ರೋಶದ ಬಿಸಿ: ವಿವಾದಿತ ಚಿತ್ರ ಬದಲಾವಣೆ!