ಬೆಂಗಳೂರು: ವಿದೇಶದಲ್ಲಿ ಅಕ್ರಮ ಆಸ್ತಿ, ಆದಾಯ ಮರೆ ಮಾಚಿದ ಆರೋಪದಡಿ ವಿಚಾರಣೆಗಾಗಿ ಮಾಜಿ ಗೃಹ ಸಚಿವ ಕೆ. ಜೆ. ಜಾರ್ಜ್ ಬೆಂಗಳೂರಿನ ಶಾಂತಿ ನಗರದಲ್ಲಿರುವ ಇಡಿ ಅಧಿಕಾರಿಗಳ ಕಚೇರಿಯಲ್ಲಿ ಸತತ ನಾಲ್ಕು ಗಂಟೆಗಳ ವಿಚಾರಣೆ ಎದುರಿಸಿ ಹೊರ ಬಂದಿದ್ದಾರೆ.
ಇಡಿ ಅಧಿಕಾರಿಗಳ ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಾರ್ಜ್, ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಸೂಕ್ತ ದಾಖಲಾತಿ ನೀಡುವಂತೆ ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ದಾಖಲೆಗಳನ್ನು ನಾನು ಕೊಡುತ್ತೇನೆ. ವಿದೇಶದಲ್ಲಿ ಹೂಡಿಕೆ ವಿಚಾರ ನೀವೇ ತೀರ್ಮಾನ ಮಾಡಬೇಡಿ. ಅವನ್ಯಾರೋ ದೂರು ಕೊಟ್ಟಿರುವ ಸಂಬಂಧ ಇಡಿ ತನಿಖೆ ಮಾಡಿದ್ದು, ನಾನು ಅದನ್ನು ಧೈರ್ಯವಾಗಿ ಎದುರಿಸುತ್ತೇನೆ. ಅವಶ್ಯಕತೆ ಇದ್ದರೆ, ಕರೆದರೆ ವಿಚಾರಣೆಗೆ ಬರುತ್ತೇನೆ. ಇಡಿ ಏನೇ ಕೇಳಿದ್ರೂ ನಾನು ಉತ್ತರ ಕೊಡಲು ತಯಾರಾಗಿದ್ದೇನೆ ಎಂದರು.
ಐಟಿ, ಇಡಿ ಯಾವುದೇ ಆಪಾದನೆ ಬಂದ ತಕ್ಷಣ ತಪ್ಪಿತಸ್ಥನಾಗಲ್ಲ. ತನಿಖೆಯಾದಾಗ ಮಾತ್ರ ಸತ್ಯ ಹೊರಬೀಳಲಿದೆ. ಸಾರ್ವಜನಿಕ ಜೀವನದಲ್ಲಿ ಮಸಿ ಬಳಿಯುವ ಕೆಲಸ ಇಲ್ಲಿ ಮಾಡಲಾಗ್ತಿದೆ. ಸಮನ್ಸ್ ಜಾರಿ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಮಾತ್ರ ಸಮನ್ಸ್ ಕೊಟ್ಟಿರೋದು. ನನ್ನ ಕುಟುಂಬ ಸದಸ್ಯರಿಗೆ ಕೊಟ್ಟಿಲ್ಲ ಎಂದರು, ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ನನಗೂ ಅದಕ್ಕೂ ಸಂಬಂಧವಿಲ್ಲ ಎಂದಷ್ಟೇ ನಿರ್ಗಮಿಸಿದರು.
ಸಿಂಗಾಪುರ ಸೇರಿದಂತೆ ವಿದೇಶಗಳಲ್ಲಿ ಕೆ. ಜೆ. ಜಾರ್ಜ್ ಅವರು ಆಸ್ತಿ ಸಂಪಾದನೆ ಮಾಡಿದ್ದು, ಕೆಲವು ಕಂಪೆನಿಗಳಿಗೆ ಷೇರುದಾರರಾಗಿದ್ದಾರೆ. ಕೋಟ್ಯಂತರ ರೂ. ಮೌಲ್ಯದ ಆಸ್ತಿ ಇದ್ದರೂ ಲೋಕಾಯುಕ್ತಕ್ಕೆ ವಿದೇಶಗಳಲ್ಲಿರುವ ಆಸ್ತಿ ವಿವರ ತೋರಿಸಲಿರಲಿಲ್ಲ. ಹೀಗಾಗಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ದಾಖಲೆ ಸಮೇತ ಸಾಮಾಜಿಕ ಕಾರ್ಯಕರ್ತ ರವಿ ಕೃಷ್ಣಾ ರೆಡ್ಡಿ ಅವರು ಎರಡು ತಿಂಗಳ ಹಿಂದೆ ಇಡಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಸಂಬಂಧ ದೂರನ್ನು ಪರಿಶೀಲಿಸಿ ಸತ್ಯಾಸತ್ಯತೆ ಕಂಡುಕೊಂಡು ಜಾರ್ಜ್ ಅವರಿಗೆ ಕಳೆದ ಎರಡು ದಿನಗಳ ಹಿಂದೆ ವಿಚಾರಣೆಗೆ ಹಾಜರಾಗುವಂತೆ ನೊಟಿಸ್ ನೀಡಿತ್ತು.