ಬೆಂಗಳೂರು: ಆರ್.ಆರ್. ನಗರ ಮತ್ತು ಶಿರಾ ಕ್ಷೇತ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಎರಡೂ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದೇವೆ. ನಾವೇ ಗೆಲ್ಲುವ ವಿಶ್ವಾಸವಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ವಿಶ್ವಾಸ ವ್ಯಕ್ತಪಡಿಸಿದರು.
ಆರ್.ಆರ್.ನಗರ ಉಪಚುನಾವಣೆಯ ಉಸ್ತುವಾರಿ ವಹಿಸಿದ್ದ ಲಿಂಬಾವಳಿ, ಈಗಾಗಲೇ ನಾವು ರಿಟನ್ ಎಕ್ಸಾಂನಲ್ಲಿ ಪಾಸ್ ಆಗಿದ್ದೇವೆ. ಚುನಾವಣಾ ಆಯೋಗದಿಂದ ರಿಸಲ್ಟ್ ಬರಬೇಕಷ್ಟೇ ಎಂದರು.
ಈ ಬೈ ಎಲೆಕ್ಷನ್ ನಮಗೆ ಸಂಖ್ಯೆ ಲೆಕ್ಕ ಅಲ್ಲ. ಆದ್ರೆ, ಈ ಗೆಲುವು ಯಡಿಯೂರಪ್ಪ ಸರ್ಕಾರದ ಬಲ ಹೆಚ್ಚಿಸಲಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಮೊದಲಿನಿಂದಲೂ ಉತ್ತಮ ಕೆಲಸ ಮಾಡಿದ್ದೇವೆ. ಶಿರಾ ಕ್ಷೇತ್ರದಲ್ಲಿ ಯಾವತ್ತು ಬಿಜೆಪಿ ಗೆದ್ದಿರಲಿಲ್ಲ, ನಮ್ಮ ಪಾಲಿಗೆ ಅದು ಮರುಭೂಮಿಯಾಗಿತ್ತು. ಇದೀಗ ಗೆಲ್ಲುವ ವಿಶ್ವಾಸವನ್ನ ಕಾಣುತ್ತಿದ್ದೇವೆ. ಎನ್.ಡಿ.ಎ ಮತ್ತು ಬಿಜೆಪಿ ಆಡಳಿತಕ್ಕೆ ಮೆಚ್ಚಿ ಜನ ಮತ ನೀಡುತ್ತಿದ್ದಾರೆ. ಮತದಾರರಿಗೆ, ಉಪ ಚುನಾವಣೆಗೆ ಸ್ಪಂದಿಸಿದ ಎಲ್ಲಾ ನಾಯಕರಿಗೆ ನಾವು ವಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಇಂದು ಮಧ್ಯಪ್ರದೇಶ ಬೈ ಎಲೆಕ್ಷನ್ನ ಮತ ಎಣಿಕೆ ಕೂಡ ನಡೆಯುತ್ತಿದ್ದು, 22 ಕ್ಷೇತ್ರಗಳ ಪೈಕಿ 18 ಕಡೆ ಬಿಜೆಪಿ ಅಭ್ಯರ್ಥಿ ಗೆಲ್ಲಲಿದ್ದಾರೆ. ಅಲ್ಲಿಯೂ ಸ್ಥಿರ ಸರ್ಕಾರ ರಚನೆಯಾಗಲಿದೆ. ಬಿಹಾರದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು. ಇತ್ತೀಚೆಗೆ ಬಂದ ಎಕ್ಸಿಟ್ ಪೋಲ್ ಫಲಿತಾಂಶ ಆತಂಕ ತಂದಿತ್ತು. ಎಲ್ಲಾ ಸಂದರ್ಭದಲ್ಲೂ ಎಕ್ಸಿಟ್ ಪೋಲ್ ನಿಜವಾಗಲ್ಲ. ದೇಶದಲ್ಲಿ 2013 ರಿಂದಲೇ ಮೋದಿ ಅಲೆ ಶುರುವಾಗಿದೆ. ಅಲ್ಲದೆ ಎನ್ಡಿಎ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ ಎಂದು ಲಿಂಬಾವಳಿ ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯಿಸಿದರು.