ಬೆಂಗಳೂರು: ಲಿವಿಂಗ್ ಟುಗೆದರ್‌ನಲ್ಲಿದ್ದ ಪ್ರೇಯಸಿ ತನ್ನನ್ನು ತೊರೆದು ಮತ್ತೊಬ್ಬನೊಂದಿಗೆ ವಿವಾಹವಾಗಿದ್ದಕ್ಕೆ ಮಾಜಿ ಲವರ್ ಕಿರುಕುಳ ನೀಡುತ್ತಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಕುಂದಲಹಳ್ಳಿ ನಿವಾಸಿ 26 ವರ್ಷದ ಸಂತ್ರಸ್ತೆ ಚಿಕ್ಕಮಗಳೂರು ಮೂಲದ ಪೃಥ್ವಿ ಎಂಬಾತನ ಜೊತೆ ಕೆಲ ವರ್ಷಗಳ ಹಿಂದೆ ಲಿವಿಂಗ್ ಟುಗೆದರ್ನಲ್ಲಿದ್ದರು. 2008ರಲ್ಲಿ ಇಬ್ಬರ ನಡುವೆ ಜಗಳವಾದ ಬಳಿಕ ಸಂತ್ರಸ್ತೆ ಬೇರೊಬ್ಬರ ಜೊತೆ ಮದುವೆಯಾಗಲು ಸಿದ್ಧವಾಗಿದ್ದಳು.
ವಿಷಯ ತಿಳಿದು ಕೋಪಗೊಂಡ ಆರೋಪಿ ಪೃಥ್ವಿ ಆಕೆಯ ಜೊತೆಗಿದ್ದ ಖಾಸಗಿ ಕ್ಷಣದ ಫೋಟೋ, ವಿಡಿಯೋಗಳನ್ನು ಮದುವೆಯಾಗುವ ವ್ಯಕ್ತಿಗೆ ಕಳುಹಿಸುವುದಾಗಿ ಕಿರುಕುಳ ನೀಡಿ ಮದುವೆ ನಿಲ್ಲಿಸಲು ಯತ್ನಿಸಿದ್ದ. ಇದರಿಂದ ನೊಂದ ಸಂತ್ರಸ್ತೆ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ತನಿಖೆ ಕೈಗೊಂಡ ಪೊಲೀಸರು ಆರೋಪಿ ಮೊಬೈಲ್ನಲ್ಲಿದ್ದ ವಿಡಿಯೋ, ಫೋಟೋ ಡಿಲಿಟ್ ಮಾಡಿಸಿ ಎಚ್ಚರಿಕೆ ನೀಡಿದ್ದರು.
ಇಷ್ಟಕ್ಕೆ ಸುಮ್ಮನಾಗದ ಆರೋಪಿ, ಸಂತ್ರಸ್ತೆಯ ಪತಿ ಮತ್ತು ಮಾವನ ಮೊಬೈಲ್ಗೆ ವಿಡಿಯೋಗಳನ್ನು ಕಳುಹಿಸಿ ಮತ್ತೆ ಬ್ಲಾಕ್ಮೇಲ್ ಮಾಡಲು ಮುಂದಾಗಿದ್ದ. ಇದರಿಂದ ಕೋಪಗೊಂಡ ಯುವತಿಯು ನನ್ನ ವೈವಾಹಿಕ ಜೀವನ ಹಾಳು ಮಾಡಲು ಮಾಜಿ ಲವರ್ ಯತ್ನಿಸುತ್ತಿದ್ದಾನೆ ಎಂದು ಆರೋಪಿಸಿ ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.