ಬೆಂಗಳೂರು : ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡ ಬೆನ್ನಲ್ಲೇ ಸಾಧನೆಯನ್ನು ಬಣ್ಣಿಸುವ 'ಮೈತ್ರಿ ಪರ್ವ' ಎಂಬ ಕೃತಿ ನಾಳೆ ಬಿಡುಗಡೆಯಾಗಲಿದೆ. ಜೂನ್ 20 ರಂದು ಬಿಡುಗಡೆಯಾಗಲಿರುವ 'ಮೈತ್ರಿ ಪರ್ವ' ಕೃತಿ ಒಂದು ವರ್ಷದ ಸರ್ಕಾರದ ಸಾಧನೆಯನ್ನು ವಿವರವಾಗಿ ಬಣ್ಣಿಸಲಿದೆ.
ವಿಧಾನಸಭಾ ಚುನಾವಣೆಯ ನಂತರ ರೂಪುಗೊಂಡ ಅತಂತ್ರ ಪರಿಸ್ಥಿತಿ, ಅದನ್ನು ನಿವಾರಿಸಲು ಜೆಡಿಎಸ್-ಕಾಂಗ್ರೆಸ್ ಒಗ್ಗೂಡಿ ಸರ್ಕಾರ ರಚಿಸಬೇಕಾದ ಸೂಕ್ಷ್ಮ ಸನ್ನಿವೇಶ, ನಂತರದ ದಿನಗಳಲ್ಲಿ ಎದುರಾದ ಆತಂಕಗಳ ನಡುವೆ ಸರ್ಕಾರ ಒಂದು ವರ್ಷದಲ್ಲಿ ಮಾಡಿದ ಸಾಧನೆಯ ವಿವರ ಕೃತಿಯಲ್ಲಿರಲಿದೆ.
ಅಧಿಕಾರಕ್ಕೆ ಬಂದ ನಂತರ ಸಿಎಂ ಕುಮಾರಸ್ವಾಮಿ ಎರಡು ಬಜೆಟ್ ಮಂಡಿಸಿದ್ದು, ಆ ಮೂಲಕ 430 ಭರವಸೆಗಳ ಪೈಕಿ 400 ಭರವಸೆಗಳನ್ನು ಈಡೇರಿಸಿದ ಕುರಿತ ವಿವರ ಕೃತಿಯಲ್ಲಿರಲಿದೆ. ಅಧಿಕಾರಕ್ಕೆ ಬಂದ ನಂತರ ರೈತರ ಸಾಲಮನ್ನಾ ಮಾಡುವ ಘೋಷಣೆ ಯಶಸ್ವಿಯಾಗಿ ಅನುಷ್ಠಾನವಾಗಿದ್ದು, ಶುರುವಿನಲ್ಲಿ ರೈತರ 2 ಲಕ್ಷ ರೂ.ವರೆಗಿನ ಸಾಲ ಮನ್ನಾಗೆ 43 ಸಾವಿರ ಕೋಟಿ ರೂ. ಬೇಕು ಎಂದಾಗಿದ್ದು, ಆನಂತರ ಅದು 24 ಸಾವಿರ ಕೋಟಿ ರೂ.ಗಳಿಗೆ ಇಳಿದ ಕುತೂಹಲಕಾರಿ ವಿದ್ಯಮಾನದ ವಿವರ ಕೃತಿಯಲ್ಲಿದೆ.
ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಸರ್ಕಾರವೊಂದು ಎರಡು ಲಕ್ಷ ರೂ.ಗಳವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡಿದ ಬೆಳವಣಿಗೆ ಇದಾಗಿದ್ದು, ಈಗಾಗಲೇ 20 ಸಾವಿರ ಕೋಟಿ ರೂ.ಗಳಷ್ಟು ಕೃಷಿ ಸಾಲ ಮನ್ನಾ ಹಣ ಬಿಡುಗಡೆ ಮಾಡಲಾಗಿದೆ.
ಉಳಿದಂತೆ ನಾಲ್ಕು ಸಾವಿರ ಕೋಟಿ ರೂ.ಗಳು ಸಹಕಾರ ಸಂಘಗಳಲ್ಲಿ ರೈತರು ಮಾಡಿದ ಕೃಷಿ ಸಾಲವಾಗಿದ್ದು, ಅವಧಿ ಪೂರ್ಣಗೊಂಡಂತೆಲ್ಲ ತನ್ನಿಂತಾನೇ ಮಾಫಿಯಾಗಲಿರುವ ಕುರಿತು ವಿವರಿಸಲಾಗಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗೃಹ ಕಚೇರಿ ಕೃಷ್ಣಾ, ವಿಧಾನಸೌಧ ಹಾಗೂ ಜೆಪಿ ನಗರದ ತಮ್ಮ ನಿವಾಸದ ಬಳಿ ನಡೆಸುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ಬಂದ ಅರ್ಜಿಗಳ ವಿವರ, ಈ ಅರ್ಜಿಗಳ ಪೈಕಿ ವಿಲೇವಾರಿಯಾದ ಅರ್ಜಿಗಳ ಸಂಖ್ಯೆಯ ವಿವರ ಕೃತಿಯಲ್ಲಿದೆ.
ಬೀದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆಯಿಂದ ಆಗಿರುವ ಅನುಕೂಲದ ಕುರಿತು ಕೃತಿಯಲ್ಲಿ ಮಾಹಿತಿ ನೀಡಲಾಗಿದ್ದು ಇದೇ ರೀತಿ ರೈತರು, ಮಹಿಳೆಯರು, ಕೂಲಿ-ಕಾರ್ಮಿಕರು ಸೇರಿದಂತೆ ಸಮಾಜದ ಎಲ್ಲ ವರ್ಗಗಳಿಗೆ ಯಾವ್ಯಾವ ರೀತಿ ಸರ್ಕಾರದ ಯೋಜನೆಗಳು ತಲುಪುವಂತೆ ಮಾಡಲಾಗಿದೆ? ಎಂಬ ವಿವರ ಕೃತಿಯಲ್ಲಿದೆ.
ಕಟ್ಟಡಗಳ ನಕ್ಷೆಗೆ ಅನುಮತಿ ನೀಡುವುದರಿಂದ ಹಿಡಿದು ವಿವಿಧ ಯೋಜನೆಗಳನ್ನು ಆನ್‍ಲೈನ್ ಮೂಲಕ ಅನುಷ್ಠಾನಗೊಳಿಸಿದ ವಿವರಗಳು ಕೃತಿಯಲ್ಲಿದ್ದು ಬಡವರ ಆರೋಗ್ಯ ರಕ್ಷಿಸುವ ಆಯುಷ್ಮಾನ್ ಕರ್ನಾಟಕ ಯೋಜನೆಯ ಕುರಿತು ವಿವರಗಳಿವೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾದ ಹಣವನ್ನು ಸಮರ್ಪಕವಾಗಿ ಬಳಸುವ ಕುರಿತು ಕೈಗೊಂಡ ಕ್ರಮ, ರಾಜ್ಯದ ವಿವಿಧ ಸಮುದಾಯಗಳಿಗೆ ಸರ್ಕಾರದ ಕಾರ್ಯಕ್ರಮಗಳನ್ನು ತಲುಪಿಸುವ ವಿಷಯದಲ್ಲಿ ತೆಗೆದುಕೊಂಡ ಎಚ್ಚರಿಕೆಗಳ ವಿವರವೂ ಇದರಲ್ಲಿದೆ ಎನ್ನಲಾಗುತ್ತಿದೆ.
ಕಲ್ಲು-ಮುಳ್ಳಿನ ದಾರಿಯಲ್ಲಿ ನಡೆದರೂ ಕಳೆದ ಒಂದು ವರ್ಷದಲ್ಲಿ ಸರ್ಕಾರ ಯಶಸ್ವಿಯಾಗಿ ಹೆಜ್ಜೆ ಗುರುತು ಮೂಡಿಸಿದ ವಿವರಗಳು ಕೃತಿಯಲ್ಲಿರಲಿವೆ ಎಂದು ಮೂಲಗಳು ಹೇಳಿವೆ.