ಬೆಂಗಳೂರು: ಡಿ.ಜೆ ಹಳ್ಳಿ ಪ್ರಕರಣದ ಹಿಂದೆ ಮಾಜಿ ಮೇಯರ್ ಸಂಪತ್ ರಾಜ್ ಕೈವಾಡ ಇದೆ ಎಂಬ ಆರೋಪ ಆಧಾರ ರಹಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂಪತ್ ಅವರ ಕೈವಾಡದ ಆರೋಪ ಸುಳ್ಳು. ಪ್ರಸ್ತುತ ತನಿಖೆ ನಡೆಯುತ್ತಿದೆ. ಸತ್ಯಾಂಶ ಹೊರ ಬರಲಿ. ಆ ನಂತರ ಯಾರು ಕಾರಣ ಎಂಬುದು ಗೊತ್ತಾಗುತ್ತೆ. ರಾಜಕೀಯ ಕಾರಣಕ್ಕೆ ಆರೋಪ ಮಾಡುವುದು ಬೇಡ. ಸಂಪತ್ ಅವರಿಗೆ ಸಿ.ವಿ.ರಾಮನ್ ನಗರ ಕ್ಷೇತ್ರವಿದೆ. ಅವರು ಯಾಕೆ ಇಲ್ಲಿಗೆ ಬರುತ್ತಾರೆ. ಇಲ್ಲಿ ಪಾಲಿಕೆ ಸದಸ್ಯರಿರಬಹುದು ಅಷ್ಟೇ. ಅದಕ್ಕೂ ಗಲಭೆಗೂ ಯಾವುದೇ ಸಂಬಂಧವಿಲ್ಲ ಎಂದರು.
ಬಿಜೆಪಿಯವರು ಲಾಭ ಮಾಡಿಕೊಳ್ಳುವ ಪ್ರಯತ್ನ ನಡೆಸಿರಬಹುದು. ಆದರೆ ಅಖಂಡ ಶ್ರೀನಿವಾಸ ಮೂರ್ತಿ ಕಾಂಗ್ರೆಸ್ನಲ್ಲೇ ಇದ್ದಾರೆ. ಇರುತ್ತಾರೆ ಕೂಡ. ಅವರು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಅವರ ತಂದೆ ಕೂಡ ಕಾಂಗ್ರೆಸ್ನಲ್ಲೇ ಇದ್ದವರು ಎಂದು ಹೇಳಿದರು.
ಪ್ರಕರಣ ಈಗ ತನಿಖೆ ಹಂತದಲ್ಲಿದೆ. ಪೊಲೀಸರು ಆರೋಪಿ ಪತ್ತೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಕೂಡ ಸತ್ಯಶೋಧನಾ ಸಮಿತಿ ರಚಿಸಿದೆ. ಅವರೂ ತನಿಖೆ ನಡೆಸುತ್ತಿದ್ದಾರೆ. ಆದಷ್ಟು ಬೇಗ ಸತ್ಯ ಹೊರ ಬೀಳಲಿದೆ. ಅಲ್ಲಿಯವರೆಗೆ ಯಾವುದೇ ಊಹಾಪೋಹಗಳಿಗೆ ಅವಕಾಶ ಬೇಡ ಎಂದು ತಿಳಿಸಿದರು.