ಬೆಂಗಳೂರು: ಬೀದಿ ಬದಿ ವ್ಯಾಪಾರಿಗಳಿಗೆ ಆರಂಭಿಸಿದ ವ್ಯಾಕ್ಸಿನ್ ವಿತರಣೆ, ಬಲಾಢ್ಯರ ಪಾಲಾಗ್ತಿದೆ. ರಾಜಕೀಯ ಪಕ್ಷದವರ ಪಾಲಾಗ್ತಿದೆ ಎಂಬ ಆರೋಪ ಕೇಳಿಬಂದಿದೆ.
ಮಹಾಲಕ್ಷ್ಮಿ ಲೇಔಟ್ನ ವ್ಯಾಕ್ಸಿನ್ ಸೆಂಟರ್ ಗಳಲ್ಲಿ ಶಂಕರ್ ಮಠ ವಾರ್ಡ್ ಬಿಜೆಪಿ ಅಧ್ಯಕ್ಷ ಮಂಜುನಾಥ್ ಮುಂದಾಳತ್ವದಲ್ಲಿ ರಾಜಕೀಯ ಪಕ್ಷದ ಮುಖಂಡರು, ಕಾರ್ಯಕರ್ತರು, ಅವರ ಮನೆಯವರಿಗೆ ಒಂದು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ವ್ಯಾಕ್ಸಿನ್ ಕೊಡಿಸಲಾಗ್ತಿದೆ ಎಂದು ಆರೋಪ ಕೇಳಿ ಬಂದಿದೆ.
ಮಾಜಿ ಕಾಂಗ್ರೆಸ್ ಕಾರ್ಪೊರೇಟರ್ ಎಂ ಶಿವರಾಜು ಮಾತನಾಡಿ, ಲೋಟಸ್ ಆಸ್ಪತ್ರೆ ಹತ್ರ ಜನ ಗುಂಪು ಸೇರಿದ್ದಾರೆ. ವ್ಯಾಕ್ಸಿನ್ ಸಿಗುತ್ತಿಲ್ಲ ಎಂದು ಬೀದಿ ಬದಿ ವ್ಯಾಪಾರಿಗಳು ದೂರು ನೀಡಿದ್ದಾರೆ. ಸ್ಥಳಕ್ಕೆ ಖುದ್ದಾಗಿ ಹೋಗಿ ನೋಡಿದಾಗ, ಬಿಜೆಪಿ ಮುಖಂಡರು ಅವರಿಗೆ ಬೇಕಾದವರಿಗೆ ವ್ಯಾಕ್ಸಿನ್ ಹಾಕಿಸುತ್ತಿದ್ದರು. ಬೀದಿ ಬದಿ ವ್ಯಾಪಾರಿಗಳು ಬಂದಿಲ್ಲದಿದ್ದರೆ, ಯಾರಿಗಾದರೂ ಕೊಡಬಹುದು ಅಂತಾರೆ. ಹಾಗಿದ್ರೆ ಮಹಾಲಕ್ಷ್ಮಿ ಲೇಔಟ್ನ ಸ್ಥಳೀಯ ಬಿಜೆಪಿ ಮುಖಂಡರು, ಅವರ ಕುಟುಂಬದವರು, ಕಾರ್ಯಕರ್ತರಿಗೆ ಹಾಕುವುದಿದ್ದರೆ ಸಾಮಾನ್ಯ ಜನರ ಕತೆ ಏನು, ವ್ಯಾಕ್ಸಿನ್ ನಲ್ಲೂ ರಾಜಕೀಯ ಯಾಕೆ ಎಂದು ಆರೋಪಿಸಿದ್ದಾರೆ.
ಇನ್ನು ಬೀದಿ ಬದಿ ವ್ಯಾಪಾರಿಗಳ ಸಂಘದ ಮಹಿಳಾ ಅಧ್ಯಕ್ಷೆಯಾದ ಪ್ರೇಮ ಮಾತನಾಡಿ, ಇವತ್ತು ವ್ಯಾಕ್ಸಿನ್ ಇದೆ ಅಂದಿದ್ದರು. ಫಾರಂ ಕೊಟ್ಟು ಸಹಿ ಮಾಡ್ಬೇಕು ಅಂದಿದ್ರು. ಆದ್ರೆ ವ್ಯಾಪಾರಿಗಳು ಬಂದಾಗ ಇಲ್ಲಿ ಯಾರ್ಯಾರೋ ಇರೋದು ನೋಡಿ, ಭಯಪಟ್ಟು ವ್ಯಾಕ್ಸಿನ್ ಸಿಗದೇ ವಾಪಾಸ್ ಹೋಗಿದ್ದಾರೆ. ಇದನ್ನು ನಾವು ಖಂಡಿಸ್ತೇವೆ. ವ್ಯಾಪಾರಿಗಳಿಗೇ ಬೇರೆ ದಿನ ಇಡಬೇಕಿತ್ತು. ಇಲ್ಲಿ ಅವರಿವರಿಗೆ ಬೇಕಾದವರಿಗೆ ವ್ಯಾಕ್ಸಿನ್ ಕೊಡಿಸುತ್ತಿದ್ದಾರೆ ಇದೆಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಓದಿ: ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವ ತಾಕತ್ತು ನನಗೆ ಬೇಡ: ಜಿಟಿಡಿಗೆ ಪ್ರತಾಪ್ ಸಿಂಹ ತಿರುಗೇಟು