ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ (ಬಿಟಿಸಿ) (Bengaluru Turf Club) ತಜ್ಞರ ಸಮಿತಿ ಶಿಫಾರಸ್ಸಿನಂತೆ ಕುದುರೆಗಳ ಸುರಕ್ಷತೆಗೆ ಹೊಸ ಲಾಯ ನಿರ್ಮಾಣ ಸೇರಿದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅವುಗಳನ್ನು ಪೂರ್ಣಗೊಳಿಸಲು ಕಾಲಾವಕಾಶ ನೀಡಬೇಕು ಎಂದು ಬಿಟಿಸಿ ಹೈಕೋರ್ಟ್ಗೆ ಮನವಿ ಮಾಡಿದೆ.
ಬಿಟಿಸಿಯಲ್ಲಿ ಕುದುರೆಗಳನ್ನು ಕ್ರೂರವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಕಂಪ್ಯಾಷನ್ ಆನ್ ಲಿಮಿಟೆಡ್ ಪ್ಲಸ್ ಆ್ಯಕ್ಷನ್ (ಕ್ಯೂಪಾ) ಸಂಸ್ಥೆ ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಬಿಟಿಸಿ ಪರ ವಕೀಲ ಎಸ್.ಎಸ್.ನಾಗಾನಂದ್ ವಾದ ಮಂಡಿಸಿ, ಕುದುರೆ ಲಾಯಗಳ ನಿರ್ಮಾಣ ಆರಂಭವಾಗಿದೆ.
800 ಕುದುರೆ ಲಾಯಗಳ ನಿರ್ಮಾಣಕ್ಕೆ ಅಂದಾಜು ಒಂದೂವರೆ ವರ್ಷ ಕಾಲಾವಕಾಶ ಬೇಕಾಗಲಿದೆ. ಈ ಸಂಬಂಧ ವಿಸ್ತೃತವಾದ ಪ್ರಮಾಣಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು. ಇದಕ್ಕೆ ಸಮ್ಮತಿಸಿದ ಪೀಠ, ಕಾಮಗಾರಿ ಪ್ರಗತಿ ವರದಿ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು 4 ವಾರ ಮುಂದೂಡಿತು.
ಪ್ರಕರಣದ ಹಿನ್ನೆಲೆ:
ಬಿಟಿಸಿಯಲ್ಲಿ ಕುದುರೆಗಳನ್ನು ಕ್ರೂರವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ವಸ್ತುಸ್ಥಿತಿ ಪರಿಶೀಲಿಸಲು ಅಧಿಕಾರಿಯೊಬ್ಬರನ್ನು ನಿಯೋಜಿಸಲು ಸರ್ಕಾರಕ್ಕೆ ಸೂಚಿಸಿತ್ತು.
ನ್ಯಾಯಾಲಯದ ಸೂಚನೆಯಂತೆ ಸರ್ಕಾರದಿಂದ ನಿಯೋಜಿಸಲ್ಪಟ್ಟಿದ್ದ ಇನ್ಸ್‌ಪೆಕ್ಟರ್ ಡಾ. ಕ್ಯಾಪ್ಟನ್ ರವಿ ರಾಯದುರ್ಗ ಟರ್ಫ್ ಕ್ಲಬ್ ಕುದುರೆಗಳ ಯೋಗಕ್ಷೇಮ ಕುರಿತು ತಪಾಸಣೆ ನಡೆಸಿ, ಈ ಕುರಿತಂತೆ ಸಮಗ್ರ ವರದಿ ಸಲ್ಲಿಸಿದ್ದರು.
ವರದಿಯಲ್ಲಿ, ಕ್ಲಬ್‌ನಲ್ಲಿ ದುಸ್ಥಿತಿಯಲ್ಲಿರುವ 850 ಕುದುರೆ ಲಾಯಗಳನ್ನು ನವೀಕರಿಸಬೇಕು. ಪಶು ವೈದ್ಯಕೀಯ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು. ಕುದುರೆ ಲಾಯಗಳ ವಿಸ್ತೀರ್ಣ ಹೆಚ್ಚಿಸಬೇಕು. ಕುದುರೆಗಳ ಸಂಖ್ಯೆಗೆ ಅನುಗುಣವಾಗಿ 88 ಪಶು ವೈದ್ಯಾಧಿಕಾರಿಗಳನ್ನು ನಿಯೋಜಿಸಬೇಕು. ಆದರೆ, ಸದ್ಯ ಕೇವಲ 12 ಮಂದಿ ಪಶು ವೈದ್ಯಾಧಿಕಾರಿಗಳಿದ್ದಾರೆ.
ರೇಸ್‌ನಿಂದ ನಿವೃತ್ತಗೊಂಡ ಕುದುರೆಗಳ ಆರೈಕೆ ವಿಚಾರವಾಗಿ ಸೂಕ್ತ ಮಾರ್ಗಸೂಚಿ ರೂಪಿಸಬೇಕು. ನಿವೃತ್ತ ಕುದುರೆಗಳನ್ನು ಹರಾಜು ಹಾಕುವ ಅಥವಾ ದಯಾಮರಣ ಕಲ್ಪಿಸುವ ಬದಲಿಗೆ ಪರ್ಯಾಯ ಮಾರ್ಗೋಪಾಯ ಹುಡುಕಬೇಕು ಎಂದು ವರದಿಯಲ್ಲಿ ತಿಳಿಸಿದ್ದರು.
ಇದನ್ನೂ ಓದಿ: ಹಣ್ಣು ತಿಂದವನು ಯಾವನೋ, ಸಿಪ್ಪೆ ತಿಂದವನು ಯಾವನೋ: ಡಿಕೆಶಿ