ಬೆಂಗಳೂರು: ರಾಮನಗರದಲ್ಲಿ ಕಮಲ ಅರಳಿಸುವ ಟಾಸ್ಕ್ನೊಂದಿಗೆ ಅಶ್ವತ್ಥನಾರಾಯಣ್ ಅವರು ಅಗ್ರೇಸಿವ್ ಆಗಿ ಕಾರ್ಯೋನ್ಮುಖವಾಗಿದ್ದಾರೆ. ಇದರಿಂದ ಆತಂಕಕ್ಕೆ ಸಿಲುಕಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಆರೋಪಿಸಿದ್ದಾರೆ.
ರಾಮನಗರದ ಲೀಡರ್ ಶಿಪ್ಗಾಗಿ ಫೈಟ್: ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಮನಗರ ಜಿಲ್ಲೆಯ ಲೀಡರ್ ಶಿಪ್ಗಾಗಿ ಆಗಿರುವ ಫೈಟ್ ಇದು. ರಾಮನಗರದಲ್ಲಿ ಅಶ್ವತ್ಥನಾರಾಯಣ್ ತೊಡೆ ತಟ್ಟಿದ್ದಕ್ಕೆ ಡಿ.ಕೆ. ಶಿವಕುಮಾರ್ ಈ ರೀತಿ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಅಶ್ವತ್ಥ ನಾರಾಯಣ್ ಅವರು ಸ್ವಲ್ಪ ಅಗ್ರೇಸಿವ್ ಆಗಿ ಕಾರ್ಯಕ್ರಮ ಜಾರಿ ಮಾಡಲು ಹೊರಟಿದ್ದಾರೆ. ಅದಕ್ಕಾಗಿ ಅವರ ಮೇಲೆ ಡಿ.ಕೆ. ಶಿವಕುಮಾರ್ ಜಿದ್ದು ಬಿದ್ದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾರೆ. ಇಬ್ಬರು ತಮ್ಮ ಅಸ್ತಿತ್ವಕ್ಕಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ. ಒಕ್ಕಲಿಗ ಲೀಡರ್ ಶಿಪ್ಗೆ ತೊಂದರೆ ಆಗುತ್ತದೆ ಎಂದು ಅಶ್ವತ್ಥನಾರಾಯಣ್ ಮೇಲೆ ಮುಗಿ ಬಿದ್ದಿದ್ದಾರೆ ಎಂದರು.
ನಾಲ್ಕು ವರ್ಷ ಎಲ್ಲ ಮಲಗಿದ್ದರು. ಚುನಾವಣೆ ಹತ್ತಿರ ಬರುವಾಗ ನಾವು ಜೀವಂತವಾಗಿ ಇದ್ದೇವೆ ಎಂದು ಕಾಂಗ್ರೆಸ್ನವರು ತೋರಿಸಿಕೊಳ್ಳುತ್ತಿದ್ದಾರೆ. ಬೆಳಗ್ಗೆ ಎದ್ದ ಕೂಡಲೇ ಡಿ.ಕೆ. ಶಿವಕುಮಾರ್, ಅಶ್ವತ್ಥನಾರಾಯಣ್ ಅನ್ನೋದು ಯಾಕೆ? ಸರ್ಕಾರ ಸಮರ್ಪಕವಾಗಿದೆ. ಸಿಎಂ ಸಮರ್ಥವಾಗಿದ್ದಾರೆ. ಅಶ್ವತ್ಥನಾರಾಯಣ್ ಸಹೋದರ ಆಗಲಿ, ಇನ್ನೊಬ್ಬನೇ ಆಗಲಿ ತನಿಖೆ ಆಗಿ, ಕ್ರಮ ಆಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಶಬ್ದದ ವಿರುದ್ಧ ಹೋರಾಟ.. 1 ಸಾವಿರ ದೇವಸ್ಥಾನಗಳಲ್ಲಿ ಭಜನೆ, ಸುಪ್ರಭಾತ ಪಠಣದ ಎಚ್ಚರಿಕೆ
ಪ್ರಿಯಾಂಕ್ ಖರ್ಗೆ ವಿರುದ್ಧ ಏಕ ವಚನದಲ್ಲೇ ವಾಗ್ದಾಳಿ: ಶಾಸಕ ಪ್ರಿಯಾಂಕ್ ಖರ್ಗೆಗೆ ನೋಟಿಸ್ ಕೊಡಬಾರದಾ? ಅವನೇನು ದೊಡ್ಡವನಾ.? ಪ್ರಿಯಾಂಕ್ ಖರ್ಗೆ ಪ್ರೆಸ್ ಮೀಟ್ ಮಾಡಿ ದಾಖಲೆ ಇದೆ ಅಂತಾರೆ. ಅವನ ಬಳಿ ಇರೋ ದಾಖಲೆ ಪೊಲೀಸರಿಗೆ ಕೊಡಲು ತಾಖತ್ ಇಲ್ವಾ?. ಕರ್ನಾಟಕ ಪೊಲೀಸ್ ದೇಶದಲ್ಲೇ ನಂಬರ್ ಒನ್. ಪೊಲೀಸರ ಬಳಿ ಹೋಗಿ ಹೇಳೋಕೆ ಹೆದರ್ತಾನೆ. ಖರ್ಗೆ ಹೋಗಿ ತಮ್ಮ ಬಳಿ ಇರೋ ದಾಖಲೆ ನೀಡಲಿ. ಅವನಿಗೆ ಸೂಕ್ತ ದಾಖಲೆ ಕೊಡೋಕೆ ಏನು? ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಸಚಿವ ಸೋಮಶೇಖರ್ ಏಕ ವಚನದಲ್ಲೇ ವಾಗ್ದಾಳಿ ನಡೆಸಿದರು.
ಅಶ್ವತ್ಥನಾರಾಯಣ್ ವಿರುದ್ಧವೇ ದೊಡ್ಡ ಷಡ್ಯಂತ್ರ: ಸಚಿವ ಅಶ್ವತ್ಥನಾರಾಯಣ್ ಮೇಲೆ ಕುಮಾರಸ್ವಾಮಿ ಆರೋಪ ಮಾಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಕುಮಾರಸ್ವಾಮಿ ಕೂಡ ಲೀಡರ್ ಶಿಪ್ಗಾಗಿಯೇ ಆರೋಪ ಮಾಡುತ್ತಿದ್ದಾರೆ. ರಾಮನಗರದಲ್ಲಿ ಬಿಜೆಪಿ ತರಲು ಅಶ್ವತ್ಥನಾರಾಯಣ್ ಅಗ್ರೇಸಿವ್ ಆಗಿ ಓಡಾಡುತ್ತಿದ್ದಾರೆ. ಅದಕ್ಕಾಗಿ ಇದನ್ನು ಅವರು ಸಹಿಸಿಕೊಳ್ಳದೇ ಆರೋಪ ಮಾಡಲಾಗುತ್ತಿದೆ. ಜಿಲ್ಲೆಗಳಲ್ಲಿ ಸಭೆಗಳಾದಾಗ ಗಲಾಟೆಗಳು ಕೂಡ ಆಗಿವೆ. ಜಿಲ್ಲೆಯಲ್ಲೇ ಅಶ್ವತ್ಥನಾರಾಯಣ್ ವಿರುದ್ಧವೇ ದೊಡ್ಡ ಷಡ್ಯಂತ್ರ ನಡೆದಿದೆ ಎಂದರು.
ಡಿ.ಕೆ. ಸುರೇಶ್ ಲೋಕಲ್ ರೌಡಿ: ಸಂಸದ ಡಿ.ಕೆ. ಸುರೇಶ್ ಕನಕಪುರದ ಲೋಕಲ್ ರೌಡಿ ತರ ಆಡುತ್ತಿದ್ದಾರೆ. ಅವರು ಎಂಪಿ ಆದ ಮೇಲಾದರೂ ತಿದ್ದಿಕೊಳ್ಳುತ್ತಾರೆ ಅಂತ ತಿಳಿದಿದ್ದೆವು. ಆದರೆ ಅವರ ವರ್ತನೆ ಮಾತ್ರ ಬದಲಾಗುತ್ತಿಲ್ಲ. ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಶ್ವತ್ಥನಾರಾಯಣ್ ಮೇಲೆ ಹಲ್ಲೆ ಮಾಡಲು ಹೋಗಿದ್ದನ್ನ ನೋಡಿದಿರಲ್ಲ. ಈಗಲಾದರೂ ತಮ್ಮ ನಡೆಯನ್ನ ಬದಲಿಸಿಕೊಳ್ಳಲಿ ಎಂದು ಹೇಳಿದರು.
ಸರ್ಕಾರ ಸಮರ್ಥವಾಗಿದೆ: ನಮ್ಮ ಸರ್ಕಾರ ಸಮರ್ಥ ಇದೆ, ಸಿಎಂ ಸಮರ್ಥರಿದ್ದಾರೆ. ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗುತ್ತದೆ. ಪ್ರಕರಣದಲ್ಲಿ ಯಾರದ್ದೇ ಕೈವಾಡ ಇದ್ದರೂ ತನಿಖೆ ಆಗಲಿ, ಅದು ಅಶ್ವತ್ಥನಾರಾಯಣ್ ಇರಲಿ ಬೇರೆ ಯಾರೇ ಇರಲಿ ಅಭ್ಯರ್ಥಿಗಳ ಬದುಕಿನ ಜತೆ ಚೆಲ್ಲಾಟ ಆಡಬಾರದು. ಅಶ್ವತ್ಥನಾರಾಯಣ್ ತಪ್ಪು ಮಾಡಿದ್ದರೆ ಶಿಕ್ಷೆ ಆಗುತ್ತದೆ. ಆದರೆ ಅಶ್ವತ್ಥನಾರಾಯಣ್ ಅವರ ತೇಜೋವಧೆ ಮಾಡುವ ಪ್ರಯತ್ನ ನಡೀತಿದೆ, ಇದು ಸರಿಯಲ್ಲ. ಯಾವುದೇ ಪ್ರಕರಣದ ತನಿಖೆ ಮಾಡಲಿ ಅದಕ್ಕೆ ನಮ್ಮ ಆಕ್ಷೇಪ ಇಲ್ಲ. ಸಿಎಂ ಯಾರ ರಕ್ಷಣೆಯನ್ನೂ ಮಾಡುತ್ತಿಲ್ಲ. ಸಹಾಯಕ ಪ್ರಾಧ್ಯಾಪಕರ ಅಕ್ರಮ ಪ್ರಕರಣ ಬಗ್ಗೆಯೂ ಸಿಎಂ ತನಿಖೆಗೆ ಆದೇಶ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.