ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ ಆರೋಪಿ ಪರಮೇಶ್ ವಾಗ್ಮೋರೆ ಎಂಬಾತನನ್ನು ಗುರುತಿಸಿದ ಸಾಕ್ಷಿದಾರರೊಬ್ಬರ ಮನೆಗೆ ತೆರಳಿ ಜೀವ ಬೆದರಿಕೆ ಹಾಕಿರುವುದಾಗಿ ಪ್ರಕರಣದ ವಿಶೇಷ ಅಭಿಯೋಜಕ ಬಾಲನ್ ಆರೋಪಿಸಿದ್ದಾರೆ.
ಪ್ರಕರಣ ಕುರಿತಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಕೋಕಾ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಕರಣದ ಪ್ರಮುಖ ಆರೋಪಿ ಪರಮೇಶ್ ವಾಗ್ಮೋರೆಯನ್ನು ಗುರುತಿಸಲು ಆರೋಪಿಯ ಸ್ನೇಹಿತ ಸಿಂದಗಿ ಮೂಲದ ದೌಲತ್ ಹಿಪ್ಪರಗಿ ಎಂಬುವರನ್ನು ಕರೆಯಿಸಿ ಸಾಕ್ಷಿಯ ಹೇಳಿಕೆ ದಾಖಲಿಸಬೇಕಿತ್ತು.
ಮಂಗಳವಾರ ಕೋರ್ಟ್ ಕಲಾಪ ಆರಂಭವಾಗುತ್ತಿದ್ದಂತೆ ವಿಶೇಷ ಅಭಿಯೋಜಕ ಬಾಲನ್, ವಾಗ್ಮೋರೆ ಸ್ನೇಹಿತ ದೌಲತ್ ಹಿಪ್ಪರಗಿಗೆ ಸಾಕ್ಷಿ ಹೇಳದಂತೆ ಅವರ ಮನೆಗೆ ನಾಲ್ವರು ಹೋಗಿ ಬೆದರಿಸಿದ್ದಾರೆ. ಅಲ್ಲದೆ ಫೋನ್ ಕರೆ ಮಾಡಿ ಆಗಂತುಕರು ವಾಗ್ಮೋರೆ ವಿರುದ್ಧ ಏನೂ ಹೇಳದಂತೆ ಬೆದರಿಸಿದ್ದಾರೆ ಎಂದು ನ್ಯಾಯಾಧೀಶರಾದ ರಾಮಚಂದ್ರ ಪಿ.ಹುದ್ದಾರ್ ಅವರ ಗಮನಕ್ಕೆ ತಂದರು.
ಕೂಡಲೇ ನ್ಯಾಯಾಧೀಶರು ಸಾಕ್ಷಿದಾರರಾದ ದೌಲತ್ ಅವರನ್ನು ಪ್ರಶ್ನಿಸಿದರು. ಆಗ ಅವರು 'ನನ್ನ ಮನೆಗೆ ಬಂದು ಯಾರೂ ಸಹ ಜೀವ ಬೆದರಿಕೆ ಹಾಕಿಲ್ಲ. ಫೋನ್ ಕರೆಯಲ್ಲೂ ಬೆದರಿಸಿಲ್ಲ' ಎಂದು ವಿಶೇಷ ಅಭಿಯೋಜಕರ ಆರೋಪ ತಳ್ಳಿ ಹಾಕಿದರು. ಇದನ್ನು ಆಲಿಸಿದ ನ್ಯಾಯಾಧೀಶರು ಮುಂದೆ ಇಂತಹ ಆರೋಪಗಳು ಸಾಬೀತಾದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಆರೋಪಿಗೆ ಡೀಫಾಲ್ಟ್ ಜಾಮೀನು ನೀಡಲು ಹೈಕೋರ್ಟ್ ನಿರಾಕರಣೆ