ಹೊಸಕೋಟೆ(ಬೆಂಗಳೂರು ಗ್ರಾಮಾಂತರ): ವಿವಾಹೇತರ ಸಂಬಂಧ ಪ್ರಶ್ನಿಸಿ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಪತ್ನಿಯೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ರಮೇಶ್ ವಿರುದ್ಧ ಅವರ ಪತ್ನಿ ದೂರು ನೀಡಿದ್ದು, ನಕಲಿ ಪೋಷಕರನ್ನು ಸೃಷ್ಟಿಸಿ ತನ್ನನ್ನು ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ತಮಗೆ ಅನ್ಯಾಯವಾಗಿದ್ದು, ನ್ಯಾಯ ಕೊಡಿಸಿ ಎಂದು ಪಿಎಸ್‌ಐ ರಮೇಶ್ ಕೆಲಸ ಮಾಡುತ್ತಿದ್ದ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿಯೇ ದೂರು ನೀಡಿದ್ದು, ಎಫ್‍ಐಆರ್ ದಾಖಲಾಗಿದೆ. ಅಲ್ಲದೆ, ರಮೇಶ್‍ಗೆ ಬೇರೆ, ಬೇರೆ ವಿವಾಹೇತರ ಸಂಬಂಧಗಳಿವೆ. ಈ ಬಗ್ಗೆ ಅವರ ಮೊಬೈಲ್‍ನಲ್ಲಿ ಅಶ್ಲೀಲ ವಿಡಿಯೋ, ಅರೆಬೆತ್ತಲೆ ಫೋಟೋಗಳು, ಮಾಟ ಮಂತ್ರದಂತಹ ಫೋಟೋಗಳಿದ್ದು, ಕೆಲ ವಿಡಿಯೋಗಳು ವೈರಲ್ ಆಗಿವೆ ಎಂದು ದೂರಿದ್ದಾರೆ.
ವಿವಾಹೇತರ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಬೇರೆ, ಬೇರೆ ಯುವತಿಯರನ್ನು ಮದುವೆಯಾಗಿದ್ದಾರೆ. ವಿವಾಹೇತರ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ತನಗೆ ಪತಿಯಿಂದಲೇ ಮಾನಸಿಕ ಕಿರುಕುಳವಾಗುತ್ತಿದ್ದು, ನ್ಯಾಯ ಕೊಡಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರು-ಪ್ರತಿದೂರು: ಪತ್ನಿ ತನ್ನ ವಿರುದ್ಧ ದೂರು ದಾಖಲಿಸುತ್ತಿದ್ದಂತೆ, ಅತ್ತ ಪಿಎಸ್‌ಐ ರಮೇಶ್ ಕೂಡ ಪತ್ನಿಯ ವಿರುದ್ಧವೇ ದೂರು ನೀಡಿದ್ದಾರೆ. ತಾನು ಮಹಿಳೆಯ ರಾಶಿ ನೋಡಿ ಪ್ರೀತಿಸಿ ವಿವಾಹವಾಗಿದ್ದೆ. ಆದರೆ ಮದುವೆಯಾದ ನಂತರ ಆಕೆ ನನಗೆ ಊರಿಗೆ ಹೋಗಲು, ತಂದೆ-ತಾಯಿ ನೋಡಲು ಬಿಡದೆ ಕಿರುಕುಳ ನೀಡುತ್ತಿದ್ದಳು ಎಂದು ಆರೋಪಿಸಿದ್ದಾರೆ. ಹೀಗೆ ಪತಿ, ಪತ್ನಿ ಪರಸ್ಪರ ಆರೋಪ-ಪ್ರತ್ಯಾರೋಪದ ಮೂಲಕ ದೂರು ದಾಖಲಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಹಲವು ಬಾರಿ ಪೊಲೀಸರು ರಾಜಿ ಮಾಡಿಸಿದ್ದರು. ಸಂಧಾನದ ಬಳಿಕವೂ ಪಿಎಸ್‌ಐ ರಮೇಶ್ ಬೇರೆ ಯುವತಿಯರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ.
ಪಿಎಸ್‌ಐ ಅಮಾನತು: ಠಾಣೆ ವ್ಯಾಪ್ತಿಯಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿಲ್ಲ ಎಂದು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸೂಲಿಬೆಲೆ ಠಾಣೆ ಪಿಎಸ್‌ಐ ರಮೇಶ್ ಅವರನ್ನು ಅಮಾನತು ಮಾಡಲಾಗಿದೆ. ಜೊತೆಗೆ ಪತ್ನಿ ನೀಡಿರುವ ದೂರಿನ ಬಗ್ಗೆ ತನಿಖೆ ನಡೆಸಲು ಪೊಲೀಸ್ ತಂಡ ರಚಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ತಿಳಿಸಿದ್ದಾರೆ.
ಇದನ್ನೂ ಓದಿ: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ ನಟಿ ರಮ್ಯಾ