ಬೆಂಗಳೂರು: ಖಾಸಗಿ ಸಂಸ್ಥೆಯೊಂದರ ಹೆಸರಿನಲ್ಲಿ ವಜ್ರದ ಆಭರಣಗಳ ಶುದ್ಧತೆಯ ಪರೀಕ್ಷಾ ನಕಲಿ ಪ್ರಮಾಣಪತ್ರ ನೀಡಿದ ಪ್ರಕರಣದಲ್ಲಿ, ಬಂಧನ ಭೀತಿ ಎದುರಿಸುತ್ತಿದ್ದ ಇಬ್ಬರು ಮಹಿಳೆಯರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಆರೋಪಿಗಳಾದ ಪ್ರತಿಕಾ ರೈ ಬೆಳ್ಯಾ ಮತ್ತು ಹರಿಣಿ ಶೆಟ್ಟಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ, ಈ ಆದೇಶ ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಅರ್ಜಿದಾರರು ಮಹಿಳೆಯರಾಗಿದ್ದು, ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ವಿಧಿಸಬಹುದಾದ ಕೃತ್ಯಗಳಿಗೆ ಸಂಬಂಧಿಸಿದ ಆರೋಪಗಳು ಅವರ ಮೇಲಿಲ್ಲ. ಅರ್ಜಿದಾರರು ವಿತರಿಸಿದ್ದಾರೆ ಎನ್ನಲಾದ ಪ್ರಮಾಣ ಪತ್ರಗಳು ದೂರುದಾರರ ಬಳಿಯಿದ್ದು, ಅವು ತನಿಖೆಗೆ ಲಭ್ಯವಿದೆ. ಹೀಗಾಗಿ, ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಬಹುದಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ನಾಲ್ವರು ಬಂಟರ ಸೆರೆ: ಗುಜರಾತ್ ಎಟಿಎಸ್ನ ಮಹತ್ವದ ಕಾರ್ಯಾಚರಣೆ
ಅಲ್ಲದೇ, ಅರ್ಜಿದಾರರನ್ನು ಪೊಲೀಸರು ಬಂಧಿಸಿದರೆ, ಎರಡು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಒಬ್ಬರ ಭದ್ರತಾ ಖಾತರಿ ಪಡೆದು ಬಿಡುಗಡೆ ಮಾಡಬೇಕು. ತನಿಖೆ ಪೂರ್ಣಗೊಳಿಸಲು ತನಿಖಾಧಿಕಾರಿಗೆ ಅರ್ಜಿದಾರರು ಸಹಕರಿಸಬೇಕು. ತನಿಖೆಗೆ ಕರೆದಾಗ ಹಾಜರಾಗಬೇಕು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಕರಣದ ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು. ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಎಂದು ಹೈಕೋರ್ಟ್ ಷರತ್ತು ವಿಧಿಸಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿರುವ ಮೆರ್ಸೆಸ್ ಇಂಟರ್ ನ್ಯಾಷನಲ್ ಜೆಮೊಲಾಜಿಕಲ್ ಸಂಸ್ಥೆ, ವಜ್ರದ ಆಭರಣಗಳ ಶುದ್ಧತೆ ಪರೀಕ್ಷಿಸಿ ಪ್ರಮಾಣ ಪತ್ರ ನೀಡುತ್ತದೆ. ಸಂಸ್ಥೆಯ ಶಾಖಾ ವ್ಯವಸ್ಥಾಪಕರಾದ ಶಮಿಕ್ ಜವೇರಿ ಅವರು ಅಶೋಕ ನಗರ ಪೊಲೀಸ್ ಠಾಣೆಗೆ 2022ರ ಮಾರ್ಚ್ 4ರಂದು ದೂರು ನೀಡಿ 2022ರ ಫೆಬ್ರವರಿ 1ರಂದು ಇಬ್ಬರು ವ್ಯಕ್ತಿಗಳು ಇ-ಮೇಲ್ ಕಳುಹಿಸಿದ್ದರು. ಅದರಲ್ಲಿ, ಪ್ರತಿಕಾ ರೈ ಬೆಳ್ಯಾ ಮತ್ತು ಹರಿಣಿ ಶೆಟ್ಟಿ ತಮ್ಮಿಂದ 60 ಸಾವಿರ ಹಣ ಪಡೆದು ಎರಡು ಪ್ರಮಾಣಪತ್ರ ವಿತರಿಸಿದ್ದಾರೆ. ಅವುಗಳ ನೈಜತೆ ತಿಳಿಸುವಂತೆ ಕೋರಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಆರೋಪಿಗಳಿಬ್ಬರೂ ಸಂಸ್ಥೆ ಹೆಸರಿನಲ್ಲಿ ನಕಲಿ ಪ್ರಮಾಣಪತ್ರ ವಿತರಿಸಿದ್ದಾರೆ ಎಂದು ಆರೋಪಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫೋರ್ಜರಿ ಮತ್ತು ವಂಚನೆ ಆರೋಪದಡಿ ಎಫ್‌ಐಆರ್ ದಾಖಲಿಸಿದ್ದರು. ಈ ಹಿನ್ನೆಲೆ ಬಂಧನ ಭೀತಿಗೆ ಒಳಗಾಗಿದ್ದ ಆರೋಪಿ ಮಹಿಳೆಯರು ನಿರೀಕ್ಷಣಾ ಜಾಮೀನು ಕೋರಿ ನಗರದ 24ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯ ಅರ್ಜಿ ವಜಾಗೊಳಿಸಿದ್ದರಿಂದ ಹೈಕೋರ್ಟ್ ಮೊರೆ ಹೋಗಿದ್ದರು.