ಬೆಂಗಳೂರು: ಬಿಜೆಪಿಯವರು ಸಮೀಕ್ಷೆಯಲ್ಲಿ ಮೂರನೇ ಸ್ಥಾನಕ್ಕೆ ಹೋಗಿದ್ದಾರೆ. ಹೀಗಾಗಿ ಅವರು ಆತಂಕದಲ್ಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಈಶ್ವರ್ ಖಂಡ್ರೆ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ತಮ್ಮ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮೀಕ್ಷೆಯಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ರೌಡಿಗಳನ್ನು, ಸಮಾಜ ಘಾತುಕ ಶಕ್ತಿಗಳನ್ನು ಸೇರ್ಪಡೆ ಮಾಡಿಕೊಳ್ಳುತ್ತಿದೆ. ರಾಜ್ಯವು ಭ್ರಷ್ಟಾಚಾರದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಆರೋಪಿಸಿದರು.
ಬಿಜೆಪಿಯಲ್ಲಿ ಇರುವವರೆಲ್ಲ ಮೋಸಗಾರರು, ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದವರು. ಅವರು ಅಧಿಕಾರಕ್ಕಾಗಿ ಯಾವ ಕೆಳ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ರಾಜ್ಯ ಸರ್ಕಾರ ಗಡಿ ವಿಚಾರವನ್ನು ಅತ್ಯಂತ ಗಂಬೀರವಾಗಿ ಪರಿಗಣಿಸಬೇಕು. ಕರ್ನಾಟಕದ ಒಂದು ಇಂಚು ಭೂಮಿಯನ್ನು ಕೂಡ ಮಹಾರಾಷ್ಟ್ರಕ್ಕೆ ಕೊಡಲು ಸಾಧ್ಯವಿಲ್ಲ ಎಂದು ಖಂಡ್ರೆ ಗುಡುಗಿದರು.
ಹೈಕಮಾಂಡ್ ತೀರ್ಮಾನಿಸುತ್ತದೆ: ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುವುದಕ್ಕೆ ಬಿಜೆಪಿಯ ಹಲವು ನಾಯಕರು ಅರ್ಜಿ ಹಾಕಿದ್ದಾರೆ, ವಲಸೆ ಹೋದವರಲ್ಲಿ ಕೆಲವರು ಸೇರ್ಪಡೆ ಆಗುತ್ತೇವೆ ಎಂದಿದ್ದಾರೆ, ಆದರೆ ಇವೆಲ್ಲದರ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ಬಿಜೆಪಿ ಮುಳುಗುವ ಹಡಗು: ನಮ್ಮಿಂದ ಯಾರೂ ಬಿಜೆಪಿಗೆ ಹೋಗುವುದಿಲ್ಲ. ಬಿಜೆಪಿ ಮುಳುಗುವ ಹಡಗು, ಅಲ್ಲಿಗೆ ಯಾಕೆ ಹೋಗ್ತಾರೆ? ಈಗ ಬಿಜೆಪಿಗೆ ಸೇರ್ಪಡೆ ಆಗಿ ಯಾರಾದ್ರೂ ಸುಸೈಡ್ ಮಾಡ್ಕೋತಾರಾ? ಸುಧಾಕರ್ ಅವರನ್ನು ಬೆಳೆಸಿದ್ದೇ ಕಾಂಗ್ರೆಸ್ಸು. ಎಂಎಲ್ಎ ಮಾಡಿದ್ದೂ ಕಾಂಗ್ರೆಸ್ಸೇ. ಹೀಗಾಗಿ ರೌಡಿಗಳ ವಿಚಾರದಲ್ಲಿ ಅವರು ಕಾಂಗ್ರೆಸ್ ಬಗ್ಗೆ ಮಾತಾಡ್ತಾರೆ. ಅವರಿಗೆ ಅಭಿನಂದನೆ ಎಂದು ಖಂಡ್ರೆ ವ್ಯಂಗ್ಯವಾಡಿದರು.
ಇದನ್ನೂ ಓದಿ: ಸಿದ್ದರಾಮಯ್ಯಗೆ ವೋಟ್ ಬ್ಯಾಂಕ್ ರಾಜಕಾರಣ ಬಿಟ್ಟು ಬೇರೇನು ಗೊತ್ತಿಲ್ಲ : ಸಚಿವ ಅಶ್ವತ್ಥನಾರಾಯಣ