ಬೆಂಗಳೂರು : ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಮೀಸಲಾತಿ ಏರಿಕೆ ಮಾಡುವ ಸಂಬಂಧ ಶುಕ್ರವಾರ ಸರ್ವಪಕ್ಷ ಸಭೆ ಕರೆದಿದ್ದರು. ಸರ್ವಪಕ್ಷದ ನಾಯಕರು ಈ ಬಗ್ಗೆ ಚರ್ಚಿಸಿದ್ದು, ಜನಗಣತಿ ಆಧಾರದ ಮೇಲೆ ಎಸ್ಸಿ ಸಮಾಜಕ್ಕೆ ಶೇ. 15 ರಿಂದ ಶೇ.17 ಕ್ಕೆ ಹೆಚ್ಚಳ ಹಾಗೂ ಎಸ್ ಟಿಗೆ ಶೇ.3 ರಿಂದ ಶೇ.7 ಕ್ಕೆ ಮೀಸಲಾತಿ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಆದಷ್ಟು ಜಾಗ್ರತೆಯಿಂದ ಸಮಯ ವ್ಯರ್ಥ ಮಾಡದೆ ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಸಿಎಂ ಕಚೇರಿ ಕೃಷ್ಣಾದಲ್ಲಿ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆ ಸದನದಲ್ಲಿ ಹೇಳಿದ್ದರು. ಹಾಗಾಗಿ, ಸಭೆ ಕರೆಯಲಾಗಿತ್ತು. ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ನ್ಯಾ.ನಾಗಮೋಹನ್ ದಾಸ್ ಕಮಿಟಿ ರಚನೆ ಮಾಡಲಾಗಿತ್ತು. ಒಂದೂವರೆ ವರ್ಷದ ನಂತರ ವರದಿಯನ್ನು ನೀಡಲಾಗಿದೆ. ಈ ವರದಿ ಅನುಷ್ಠಾನಕ್ಕೆ ತರಬೇಕೆಂದು ನಾಯಕ ಸಮುದಾಯದ ಶ್ರೀಗಳು ಸುಧೀರ್ಘ ಧರಣಿ ಮಾಡಿದ್ದಾರೆ. ಇದರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸರ್ವ ಪಕ್ಷದ ಸಭೆ ಕರೆದಿದ್ದು, ಸರ್ವ ಪಕ್ಷಗಳೂ ಈ ಬಗ್ಗೆ ನಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಿದ್ದೇವೆ ಎಂದರು.
ನ್ಯಾ. ನಾಗಮೋಹನ್ ದಾಸ್ ವರದಿಯಲ್ಲಿ ಇದರ ಪ್ರಮುಖ ವಿಷಯ ಇದ್ದರೂ, ದೇಶದ ಹಲವಾರು ರಾಜ್ಯಗಳಲ್ಲಿರುವ ಹಲವಾರು ಸಣ್ಣಪುಟ್ಟ ಸಮಾಜದರು ಇದ್ದಾರೆ. 75 ವರ್ಷದಲ್ಲಿ ಎಂದೂ ಮೀಸಲಾತಿ ಕಾಣದೆ ಇರುವ ಅನೇಕ ಸಮುದಾಯಗಳಿವೆ. ಅದರ ಜೊತೆಗೆ ಒಳ ಮೀಸಲಾತಿ ಬಗ್ಗೆಯೂ ಚರ್ಚೆ ಮಾಡಿದ್ದೇವೆ. 2005 ರಲ್ಲಿ ಒಳ ಮೀಸಲಾತಿ ವಿಚಾರವಾಗಿ ಕಮಿಟಿ ರಚನೆ ಮಾಡಿತ್ತು. ಆಗಿನ ಸರ್ಕಾರ ಆ ವರದಿ ಕೊಟ್ಟು 10 ವರ್ಷಗಳಾಗಿವೆ. ಇನ್ನೂ ಅದರ ಕಾರ್ಯಗತವಾಗಿಲ್ಲ. ಆದರೆ, ಅದಕ್ಕೆ ಕೋಟ್ಯಂತರ ರೂ. ಹಣ ಖರ್ಚಾಗಿದೆ. ಇದರ ಬಗ್ಗೆಯೂ ಕ್ರಮ ತೆಗೆದುಕೊಳ್ಳುವಂತೆ ಸಭೆಯಲ್ಲಿ ಹೇಳಿದ್ದೇವೆ ಎಂದರು.
ರಾಜ್ಯ ಭಾಷೆಗಳಲ್ಲಿ ಪರೀಕ್ಷೆಗೆ ಒತ್ತಾಯ : ಕೇಂದ್ರ ಸರ್ಕಾರದಿಂದ 20 ಸಾವಿರ ನೇಮಕಾತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಕೇವಲ ಇಂಗ್ಲಿಷ್, ಹಿಂದಿಯಲ್ಲಿ ಮಾತ್ರ ಪರೀಕ್ಷೆಗೆ ಅವಕಾಶ ನೀಡಲಾಗುತ್ತಿದೆ ಎಂದು ಕೇಂದ್ರದ ನೀತಿ ವಿರುದ್ಧ ಅಸಮಾಧಾನ ಹೊರಹಾಕಿದರು. ಆಯಾ ರಾಜ್ಯಗಳಲ್ಲಿ ಭಾಷಾವಾರು ಪರೀಕ್ಷೆಗೆ ಅವಕಾಶ ನೀಡಬೇಕು. ಯುಪಿಎಸ್ಸಿ ಮಾದರಿಯಲ್ಲೇ ಅವಕಾಶ ನೀಡಬೇಕು. ಕೂಡಲೇ ಈ ನಿರ್ಧಾರವನ್ನು ವಾಪಸ್ ಪಡೆಯಬೇಕು. ಇನ್ನೆರಡು ದಿನಗಳಲ್ಲಿ ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಗಿಎ ಪತ್ರ ಬರೆಯುವುದಾಗಿ ಹೇಳಿದರು.
ಬೆಂಗಳೂರು ಅಭಿವೃದ್ಧಿಯ ನೀಲನಕ್ಷೆ ಅನಾವರಣ : ಜನತಾಮಿತ್ರದ ಸಮಾರೋಪ ಸಮಾರಂಭ ಮಳೆಯಿಂದಾಗಿ ಮೂರು ಬಾರಿ ಮುಂದೂಡಲ್ಪಟ್ಟಿತ್ತು. ಇಂದು ಮಧ್ಯಾಹ್ನ 3 ಗಂಟೆಗೆ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದ ಮೂಲಕ ಬೆಂಗಳೂರಿನ ಸಮಸ್ಯೆ ಅನಾವರಣವಾಗಲಿದೆ. ಸಾವಿರಾರು ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ತಿಳಿಸಿದ್ದಾರೆ. ಬೆಂಗಳೂರು ಅಭಿವೃದ್ಧಿಯ ನೀಲನಕ್ಷೆ ಸಭೆಯಲ್ಲಿ ಅನಾವರಣವಾಗಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಸಮಾವೇಶದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶದಲ್ಲಿ ಒಂದು ಲಕ್ಷ ಕಾರ್ಯಕರ್ತರು ಭಾಗಿಯಾಗುವ ಸಾಧ್ಯತೆ ಇದೆ. ಶಿಕ್ಷಣದ ಕುರಿತಂತೆ ಸಾರ್ವಜನಿಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಗರದಲ್ಲಿ ನಡೆದ ಜನತಾಮಿತ್ರ ಯಾತ್ರೆ ವೇಳೆ ಕೆರೆ, ಶಿಕ್ಷಣ, ಆರೋಗ್ಯ, ರಸ್ತೆ, ಒತ್ತುವರಿ ಕುರಿತಂತೆ ಮಾಹಿತಿ ನೀಡಿದ್ದಾರೆ. ಉಚಿತ ಶಿಕ್ಷಣದ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : SC-STಗೆ ನಾಗಮೋಹನದಾಸ ಸಮಿತಿಯ ಶಿಫಾರಸಿಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ : ಸಿದ್ದರಾಮಯ್ಯ ಒತ್ತಾಯ