ಬೆಂಗಳೂರು: ಕೊರೊನಾ ಕಾಟದಿಂದ 12 ಸಾವಿರಕ್ಕೂ ಹೆಚ್ಚು ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಬದುಕು ಸಂಕಷ್ಟದಲ್ಲಿದೆ. ಕಳೆದ ನಾಲ್ಕು ತಿಂಗಳಿಂದ ಕೆಲಸ ಇಲ್ಲದೆ ನಮ್ಮ ಬದುಕು ಅಕ್ಷರಶಃ ಬೀದಿಗೆ ಬಂದಿದೆ ಎಂದು ಅಖಿಲ ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘ ತಮ್ಮ ಕಷ್ಟ ತೋಡಿಕೊಂಡಿದೆ.
ಇಂದು ನಟ ನಿರ್ಮಾಪಕ ಮದನ್ ಪಟೇಲ್ ನೇತೃತ್ವದಲ್ಲಿ ಸಾಂಸ್ಕೃತಿಕ ಕಲಾವಿದರ ಸಂಘದ ಸುದ್ದಿಗೋಷ್ಠಿ ನಡೆಸಿತು. ಬಳಿಕ ಮಾತನಾಡಿದ ಮದನ್ ಪಟೇಲ್, ರಾಜ್ಯ ಸರ್ಕಾರ ಕೊರೊನಾದಿಂದ ಕಷ್ಟಕ್ಕೆ ಒಳಗಾಗಿದ್ದವರಿಗೆ ಸ್ಪಂದಿಸಿದ. ಹಾಗೆಯೇ ನಮಗೂ ಸ್ಪಂದಿಸಬೇಕು. ಸರ್ಕಾರ ನಮಗೆ ಹಣಕಾಸಿನ ನೆರವು ನೀಡುವುದು ಬೇಡ, ಮುಂದಿನ ದಿನಗಳಲ್ಲಿ ನಡೆಯುವ ಮದುವೆ, ಗಣೇಶ ಹಬ್ಬ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ವಾದ್ಯಗೋಷ್ಠಿ ನಡೆಯುವುದಕ್ಕೆ ಅವಕಾಶ ಕೊಡಲಿ. ಇಲ್ಲವಾದರೆ ಸರ್ಕಾರ ನಮ್ಮ ಕಲಾವಿದರಿಗೆ ಮಾಶಾಸನ ನೀಡಲಿ ಎಂದು ಮದನ್ ಪಟೇಲ್ ಸರ್ಕಾರಕ್ಕೆ ಮನವಿ ಮಾಡಿದರು.
ಅಲ್ಲದೇ ಅಖಿಲ ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘ ಈಗಾಗಲೇ ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರದಲ್ಲೇ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವ ಸಿಟಿ ರವಿ ಅವರನ್ನು ಭೇಟಿ ಮಾಡಿ ಮತ್ತೊಮ್ಮೆ ಮನವಿ ಸಲ್ಲಿಸುತ್ತೇವೆ. ಒಂದು ವೇಳೆ ಆಗಲೂ ಸರ್ಕಾರ ಸ್ಪಂದಿಸದೆ ಹೋದಲ್ಲಿ ಮುಖ್ಯಮಂತ್ರಿ ಮನೆ ಮುಂದೆ ರಾಜ್ಯದ ಎಲ್ಲಾ ವಾದ್ಯಗೋಷ್ಠಿ ಕಲಾವಿದರು ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಮದನ್ ಪಟೇಲ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇನ್ನು ಇದೇ ವೇಳೆ ಮಾತನಾಡಿದ ಅಖಿಲ ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ ಶಂಕರ್, ಕೊರೊನಾದಿಂದ ಕೆಲಸ ಇಲ್ಲದೆ ಬದುಕು ಸಾಗಿಸಲೂ ಆಗದೆ ಈಗಾಗಲೇ ಮೂರು ಕಲಾವಿದರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಆರ್ಕೆಸ್ಟ್ರಾ ನಡೆಸಲು ಸರ್ಕಾರ ಅನುಮತಿ ನೀಡಬೇಕು ಇಲ್ಲವಾದಲ್ಲಿ ಗಣೇಶ ಹಬ್ಬಕ್ಕೂ ಮುಂಚೆಯೇ ರಾಜ್ಯದಲ್ಲಿರುವ ಎಲ್ಲಾ ಸಾಂಸ್ಕೃತಿಕ ಕಲಾವಿದರು ಕುಟುಂಬ ಸಮೇತ ಮುಖ್ಯಮಂತ್ರಿಗಳ ಮನೆ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.