ಬೆಂಗಳೂರು : ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹಾಗೂ ಕನ್ನಡಿಗ ಮೋಹನ್ ಎಂ ಶಾಂತನಗೌಡರ ಅವರು ವಿಧಿವಶರಾದ ಹಿನ್ನೆಲೆ ಗೌರವಾರ್ಥ ಸಂತಾಪ ಸೂಚಿಸಲು ಹೈಕೋರ್ಟ್ ಪೀಠಗಳು ಸೇರಿದಂತೆ ರಾಜ್ಯದ ಎಲ್ಲ ನ್ಯಾಯಾಲಯಗಳ ವಿಚಾರಣೆಯನ್ನು ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ಈ ಕುರಿತು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಅವರ ಆದೇಶದಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ ಶಿವಶಂಕರೇಗೌಡ ಅವರು ನೋಟಿಫಿಕೇಷನ್ ಹೊರಡಿಸಿದ್ದಾರೆ. ಅದರಂತೆ ಇಂದು ರಾಜ್ಯ ಹೈಕೋರ್ಟ್ನ ಬೆಂಗಳೂರು ಪ್ರಧಾನ ಪೀಠ, ಕಲಬುರ್ಗಿ, ಧಾರವಾಡ ಪೀಠಗಳು ಸೇರಿದಂತೆ ರಾಜ್ಯದ ಎಲ್ಲ ನ್ಯಾಯಾಲಯಗಳ ಕಲಾಪವನ್ನು ರದ್ದುಪಡಿಸಲಾಗಿದೆ. ಇಂದು ನಡೆಯಬೇಕಿದ್ದ ಎಲ್ಲ ಪ್ರಕರಣಗಳ ವಿಚಾರಣೆಯನ್ನು ನಾಳೆಗೆ(ಏ.27) ನಿಗದಿಪಡಿಸಲಾಗಿದೆ.
ವಿಶೇಷ ಪೀಠವೂ ರದ್ದು :
ಸಾರಿಗೆ ನೌಕರರು ನಡೆಸಿದ್ದ ಮುಷ್ಕರ ಹಾಗೂ ಕಾರ್ಮಿಕರನ್ನು ವಜಾಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಲು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಶೇಷ ಪೀಠ ಇಂದು ಕಲಾಪ ನಡೆಸಬೇಕಿತ್ತು. ಆನ್ಲೈನ್ ಮೂಲಕ ನಡೆಯಲಿದ್ದ ಅರ್ಜಿ ವಿಚಾರಣೆಗೆ ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ವರ್ಚುಯಲ್ ಕೋರ್ಟ್ ಮೂಲಕ ಹಾಜರಿದ್ದರು. ಅಡ್ವೊಕೇಟ್ ಜನರಲ್ ಕೂಡ ಆನ್ ಲೈನ್ ನಲ್ಲಿ ಸರ್ಕಾರದ ನಿಲುವು ತಿಳಿಸಲು ಸಿದ್ದರಿದ್ದರು. ಆದರೆ, ರಜಾ ಕಾಲದ ವಿಶೇಷ ಪೀಠ ರದ್ದಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ನಾಳೆಗೆ ಮುಂದೂಡಲಾಗಿದೆ.