ನೆಲಮಂಗಲ: ರಾಜ್ಯದಲ್ಲಿನ ಬಹುತೇಕ ಮುಸ್ಲಿಂಮರು ಸಿದ್ದರಾಮಯ್ಯ ಸಿಎಂ ಆಗಲು ಬಯಸುತ್ತಾರೆ, ಆದರೆ, ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ತಿರ್ಮಾನವೇ ಅಂತಿಮ ಎಂದು ಶಾಸಕ ಜಮೀರ್ ಅಹಮದ್ ದಾಬಸ್ ಪೇಟೆಯಲ್ಲಿ ಹೇಳಿದರು. ನೆಲಮಂಗಲ ತಾಲೂಕಿನ ಮೂಲಕ ಮಧುಗಿರಿಗೆ ಕಾರ್ಯನಿಮಿತ್ತ ಹೋಗುತ್ತಿದ್ದ ವೇಳೆ ದಾಬಸ್ ಪೇಟೆಯಲ್ಲಿ ಕಾರ್ಯಕರ್ತರು ಮತ್ತು ಮುಸ್ಲಿಂ ಬಾಂಧವರು ಬರಮಾಡಿಕೊಂಡು ಸನ್ಮಾನಿಸಿದರು. ಇದೇ ವೇಳೆ, ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲಿ ಪ್ರವಾಸ ಮಾಡಿದರೂ ಎಲ್ಲಾ ಸಮುದಾಯದರು ಸಿದ್ದರಾಮಯ್ಯ ಸಿಎಂ ಆಗಲು ಬಯಸುತ್ತಿದ್ದಾರೆ. ಹಾಗೆಯೇ ಮುಸ್ಲಿಂ ಸಮುದಾಯವರು ಸಹ ಸಿದ್ದರಾಮಯ್ಯ ಸಿಎಂ ಆಗಲು ಬಯಸುತ್ತಿದ್ದಾರೆ. ಆದರೆ, ಹೈಕಮಾಂಡ್ ತಿರ್ಮಾನವೇ ಅಂತಿಮ ಎಂದರು.
ನಾನು ಸಹ ಮೊದಲಿನಿಂದಲೂ ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಹೇಳುತ್ತಿದ್ದು ಈಗಲು ಸಹ ಈ ಮಾತಿಗೆ ಬದ್ದನಾಗಿದ್ದಾನೆ. ಇದು ನನ್ನ ವೈಯಕ್ತಿಕ ಹೇಳಿಕೆ ಎಂದರು. ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಳಒಪ್ಪಂದ ಮಾಡಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 2018ರ ಚುನಾವಣೆಯಲ್ಲೂ ಡಾ.ಯತಿಂದ್ರ ಅವರನ್ನು ಸೋಲಿಸಲು ಜೆಡಿಎಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಯತಿಂದ್ರ 50 ಸಾವಿರ ಮತಗಳ ಅಂತರದಲ್ಲಿ ಗೆದ್ದರು, ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ದಾಖಲೆಯ ಅಂತರದಲ್ಲಿ ಜಯ ಸಾಧಿಸುತ್ತಾರೆ, ಈ ಗೆಲುವು ಇತಿಹಾಸವಾಗಲಿದೆ ಎಂದು ಹೇಳಿದರು.
ಹಾಗೆಯೇ ಮುಸ್ಲಿಂ ಮೀಸಲಾತಿ ರದ್ದು ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, 30 ವರ್ಷಗಳ ಹಿಂದೆ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇಕಡಾ 4ರಷ್ಟು ಮೀಸಲಾತಿ ನೀಡಲಾಗಿದೆ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ 1994ರಲ್ಲಿ ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ಅನುಷ್ಠಾನಕ್ಕೆ ತರಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಇಂದು ಏಕಾಏಕಿ ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ಮಾಡಿದೆ, ಮೀಸಲಾತಿ ರದ್ದು ಮಾಡಲು ಒಂದು ಕ್ರಮ ಇದೆ. ಸಚಿವ ಸಂಪುಟದಲ್ಲಿ ತೀರ್ಮಾನವಾಗಬೇಕು. ಅಸೆಂಬ್ಲಿಯಲ್ಲಿ ಚರ್ಚೆ ಆಗಬೇಕು ಮತ್ತು ಹಿಂದುಳಿದ ವರ್ಗಗಳ ಅಯೋಗದ ವರದಿಯನ್ನ ಕೇಳಬೇಕು. ನಮಗೆ ನ್ಯಾಯಾಲಯದಲ್ಲಿ ನಂಬಿಕೆ ಇದೆ, ಕೋರ್ಟ್ನಲ್ಲಿ ಮೀಸಲಾತಿ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಸ್ಟೇ ನೀಡಲಾಗಿದೆ ಎಂದರು.
ಇದನ್ನೂ ಓದಿ: ರಾಜ್ಯ ಚುನಾವಣಾ ಅಖಾಡಕ್ಕೆ ಧುಮುಕಿರುವ ಪ್ರಮುಖ ಅಭ್ಯರ್ಥಿಗಳ ಮೇಲಿದೆ ಹತ್ತು ಹಲವು ಪ್ರಕರಣಗಳು
ಸಧ್ಯ ಜಮೀರ್ ಅಹ್ಮದ ಅವರು ಚಾಮರಾಜಪೇಟೆಯಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧಿಸಿ ಗೆದ್ದಿರುವ ಜಮೀರ್ ಈ ಬಾರಿ ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದಾರೆ. ಚಾಮರಾಜಪೇಟೆಯ ಕ್ಷೇತ್ರದಲ್ಲಿ ಪ್ರತಿಬಾರಿ ತ್ರಿಕೋನ ಸ್ಪರ್ಧೆಯೇ ಎದ್ದು ಕಾಣುತ್ತದೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮಧ್ಯೆ ಜಿದ್ದಾಜಿದ್ದಿ ಸಾಮಾನ್ಯ. ಆದರೆ, ಈ ಕ್ಷೇತ್ರದಲ್ಲಿ ಜಮೀರ್ ಖಾನ್ ಪ್ರಾಬಲ್ಯವೇ ಹೆಚ್ಚಾಗಿದ್ದು, ಜಮೀರ್, 2008, 2013ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಜಯಿಸಿದ್ದರು. 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: ಚಾಮರಾಜಪೇಟೆ ಕ್ಷೇತ್ರದಲ್ಲಿ ಪಕ್ಷಕ್ಕಿಂತ ಜಮೀರ್ ವರ್ಚಸ್ಸೇ ಹೆಚ್ಚು: ಈ ಬಾರಿ ರಣಕಣದ ಬದಲಾದ ರಾಜಕೀಯ ಲೆಕ್ಕಾಚಾರ ಏನು?